ಬೆಳಗಾವಿ: ಅಥಣಿಯ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಅವರು ಇದೀಗ ಪರೋಕ್ಷವಾಗಿ ಗೋಕಾಕ ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಸಿಡಿದೆದ್ದಿದ್ದಾರೆ. ಎಂದಿನಂತೆ ತಮ್ಮ ಹರಿತ ಮಾತಿನ ಮೂಲಕ ತಿವಿದಿದ್ದಾರೆ. ನಾನು ಬೇರೆ ಪಕ್ಷಕ್ಕೆ ಹೋಗುವುದಾಗಿ ಎಲ್ಲಿಯೂ ಹೇಳಿಲ್ಲ. ನಾನು ಬಿಜೆಪಿಗೆ ಸೇರುತ್ತೇನೆ ಎಂದು ಹೇಳುತ್ತಿದ್ದಾರೆಯೋ, ಮುಂದೆ ಬಿಜೆಪಿಯಲ್ಲಿ ಅವರೇ ಬಹಳ ದಿನ ಇರಲ್ಲ. ಜೆಡಿಎಸ್ ಗೆ ಸೇರುತ್ತಾರೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳುವ ಮೂಲಕ ಪರೋಕ್ಷವಾಗಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ತಿರುಗೇಟು ಕೊಟ್ಟರು.
ಕೆಲವರು ದುರುದ್ದೇಶದ ಕಾರಣಕ್ಕೆ ಏನೇನೋ ವಿಷಯ ಚರ್ಚಿಸುತ್ತಿದ್ದಾರೆ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳಲ್ಲ. ಅವರೇ ಬೇರೆ ಪಕ್ಷಕ್ಕೆ ಹೋಗಲು ಚಿಂತನೆ ನಡೆಸಿದ್ದಾರೆ. ಹಾಗಾಗಿ ನನ್ನ ಬಗ್ಗೆ ಅನುಮಾನ ಏಕೆ. ತಲೆಬುಡ ಇಲ್ಲದೆ ಚರ್ಚಿಸುವವರು ಆಡುವ ಮಾತು ಮತ್ತು ಆರೋಪಗಳಿಗೆ ನಾನು ಕಿವಿಗೊಡುವುದಿಲ್ಲ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಪಕ್ಷದ ವರಿಷ್ಠರು ಸಚಿವ ಸ್ಥಾನದ ಬಗ್ಗೆ ತೀರ್ಮಾನಿಸುತ್ತಾರೆ. ನಮ್ಮ ಪಕ್ಷದಲ್ಲಿ ಯಾವ ಗೊಂದಲವೂ ಇಲ್ಲ. ಕೆಲ ದಿನಗಳಲ್ಲೇ ಎಲ್ಲದಕ್ಕೂ ತೆರೆ ಬೀಳುತ್ತದೆ. ನನ್ನ ಕ್ಷೇತ್ರದಲ್ಲಿ ಸೋಮವಾರ ಅನೇಕ ಕಾರ್ಯಕ್ರಮ ಇವೆ. ಅವುಗಳಲ್ಲಿ ಭಾಗವಹಿಸಬೇಕಿರುವ ಕಾರಣ, ನಾನು ದೆಹಲಿಗೆ ಹೋಗುತ್ತಿಲ್ಲ ಎಂದು ಹೇಳಿದರು.


