ಬೆಂಗಳೂರು : ಚುನಾವಣೆಗಳ ಸಂದರ್ಭದಲ್ಲಿ ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚಿಸುವ ವರದಿ ಆಗಾಗ ಗಮನಿಸುತ್ತೇವೆ. ಈಗ ಅಂತಹ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕೋಟ್ಯಂತರ ರೂ. ವಂಚನೆ ನಡೆಸಿರುವ ಬಗ್ಗೆ ಇದೀಗ ಜೆಡಿಎಸ್ ಮಾಜಿ ಶಾಸಕರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿ ವಿಜಯಪುರ ಜಿಲ್ಲೆ ನಾಗಠಾಣ ಕ್ಷೇತ್ರದ ಮಾಜಿ ಶಾಸಕ ದೇವಾನಂದ ಸಿಂಗ್ ಚವ್ಹಾಣ್ ಅವರಿಂದ ₹2 ಕೋಟಿ ಸುಲಿಗೆ ಮಾಡಿದ್ದ ಆರೋಪದಡಿ ಇದೀಗ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಸಹೋದರ, ಸಹೋದರಿ ಸೇರಿದಂತೆ ಮೂವರ ವಿರುದ್ದ ಬಸವೇಶ್ವರನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಗೋಪಾಲ ಜೋಶಿ, ವಿಜಯಲಕ್ಷ್ಮಿ ಜೋಶಿ ಹಾಗೂ ಅಜಯ್ ಜೋಶಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಸುನಿತಾ ಚವ್ಹಾಣ್ ಅವರು ದೂರು ನೀಡಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ದೇವಾನಂದ ಸಿಂಗ್ ಚವ್ಹಾಣ್ ಅವರು 2018ರಲ್ಲಿ ಜೆಡಿಎಸ್ನಿಂದ ಟಿಕೆಟ್ ಪಡೆದು ಜಯಗಳಿಸಿದ್ದರು. 2023ರ ಚುನಾವಣೆಯಲ್ಲಿ ಸೋತಿದ್ದರು. ನಂತರ, ಲೋಕಸಭೆ ಚುನಾವಣೆ ಟಿಕೆಟ್ಗೆ ಪ್ರಯತ್ನಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಅಥಣಿ ಎಂಜಿನಿಯರ್ ಶೇಖರ ನಾಯಕ ಎಂಬುವವರು ಪ್ರಹ್ಲಾದ ಜೋಶಿ ಅವರ ಸಹೋದರ ಗೋಪಾಲ ಜೋಶಿ ಅವರ ಪರಿಚಯ ಇರುವುದಾಗಿ ಹೇಳಿ, ಲೋಕಸಭೆ ಚುನಾವಣೆಗೆ ನೀವು ಸ್ಪರ್ಧೆ ನಡೆಸಿ ಎಂದು ಪುಸಲಾಯಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿರುವ ಮಾಹಿತಿ ನೀಡಿದ್ದರು. ಹುಬ್ಬಳ್ಳಿಯ ಮನೆಗೆ ಕರೆದೊಯ್ದು ಗೋಪಾಲ ಜೋಶಿ ಅವರನ್ನು ಭೇಟಿ ಮಾಡಿಸಿದ್ದರು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಕೇಂದ್ರದಲ್ಲಿ ನನ್ನ ಸಹೋದರ ಪ್ರಹ್ಲಾದ ಜೋಶಿ ಅವರ ವರ್ಚಸ್ಸು ತುಂಬಾ ಚೆನ್ನಾಗಿದೆ. ಅವರು ಹೇಳಿದಂತೆ ಮೋದಿ ಹಾಗೂ ಅಮಿತ್ ಶಾ ಇಬ್ಬರೂ ಕೇಳುತ್ತಾರೆ. ನನ್ನ ತಮ್ಮನ ಜತೆಗೆ ಮಾತನಾಡಿ, ನಿಮಗೆ ವಿಜಯಪುರ ಕ್ಷೇತ್ರಕ್ಕೆ ಬಿಜೆಪಿಯ ಟಿಕೆಟ್ ಕೊಡಿಸುತ್ತೇನೆ ಎಂದು ಗೋಪಾಲ್ ಜೋಶಿ ಭರವಸೆ ನೀಡಿದ್ದರು. ₹5 ಕೋಟಿ ಬೇಡಿಕೆ ಇಟ್ಟಿದ್ದರು. ಅಷ್ಟು ಹಣವಿಲ್ಲ ಎಂದಾಗ ₹25 ಲಕ್ಷ ಕೇಳಿದ್ದರು. ಚೆಕ್ ಸಹ ಪಡೆದಿದ್ದರು. ಆ ಹಣವನ್ನು ಬೆಂಗಳೂರಿನ ಬಸವೇಶ್ವರನಗರದಲ್ಲಿ ಇರುವ ವಿಜಯಲಕ್ಷ್ಮಿ ಅವರ ಮನೆಗೆ ತಲುಪಿಸಲಾಗಿತ್ತು. ನಂತರ, ಅಮಿತ್ ಶಾ ಅವರ ಆಪ್ತ ಸಹಾಯಕರ ಜತೆಗೆ ಮಾತನಾಡಿರುವುದಾಗಿ ಹೇಳಿದ್ದರು. ನಂತರ, ಟಿಕೆಟ್ ಕೊಡಿಸದೇ ಮೋಸ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ. ನಂತರದ ದಿನಗಳಲ್ಲಿ ಮುಂದಿನ ಚುನಾವಣೆಯಲ್ಲಿ ಸಂಪೂರ್ಣ ಖರ್ಚು ನೋಡಿಕೊಳ್ಳುವುದಾಗಿ ಹೇಳಿ ರೂ. 1.75 ಕೋಟಿ ಪಡೆದುಕೊಂಡಿದ್ದರು ಎಂಬುದಾಗಿ ದೂರು ನೀಡಲಾಗಿದ್ದು, ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.