ಬೆಳಗಾವಿ : ಹಿರಿಯ ಪತ್ರಿಕೋದ್ಯಮಿ ಅಶ್ರಫ್ ಬಾಬಾಸಾಬ ಧಾರವಾಡಕರ ಅವರಿಗೆ ಬೆಳಗಾವಿ ಜಿಲ್ಲೆಯ ಮಾಧ್ಯಮ ವಿಭಾಗದ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ಸಮದರ್ಶಿ ಪತ್ರಿಕೆ ಸಂಪಾದಕರಾಗಿ ಅವರು ಪತ್ರಿಕೆ ಮುನ್ನೆಡೆಸುತ್ತಿದ್ದಾರೆ.
ಕಾರ್ಲ್ ಮಾರ್ಕ್ಸ್ ಮತ್ತು ಜಗಜ್ಯೋತಿ ಬಸವೇಶ್ವರ ಅವರಿಂದ ಪ್ರಭಾವಿತರಾಗಿರುವ ಇವರು ಬೆಳಗಾವಿಯ ಪತ್ರಿಕೋದ್ಯಮದ ಅಜಾತಶತ್ರು ಎಂದೇ ಗುರುತಿಸಿಕೊಂಡಿದ್ದಾರೆ. ತೆರೆಯ ಮರೆಯಲ್ಲಿ ಇದ್ದುಕೊಂಡು ಪತ್ರಿಕೋದ್ಯಮದ ನೈಜ ಗುರಿ ಸಾಧಿಸುತ್ತಿರುವ ಇವರು ಕನ್ನಡ ಪತ್ರಿಕೋದ್ಯಮದ ಬೆಳವಣಿಗೆಗಾಗಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಇವರು ಸಲ್ಲಿಸಿರುವ ಸೇವೆ ಅಪಾರವಾಗಿದೆ. ಆದರೆ ಇವರನ್ನು ಇರುವರೆಗೆ ರಾಜ್ಯಮಟ್ಟದಲ್ಲಿ ಗುರುತಿಸುವ ಕೆಲಸ ಆಗದೇ ಇರುವುದು ಮಾತ್ರ ಅತ್ಯಂತ ಬೇಸರದ ಸಂಗತಿ ಎನ್ನುವುದು ಅವರನ್ನು ಹತ್ತಿರದಿಂದ ಬಲ್ಲವರ ಅಭಿಪ್ರಾಯವಾಗಿದೆ.
ಇದೀಗ ಜಿಲ್ಲಾ ಮಾಧ್ಯಮ ವಿಭಾಗದ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿರುವುದು ಬೆಳಗಾವಿ ಪತ್ರಿಕೋದ್ಯಮಕ್ಕೆ ಸಂದ ಗೌರವ ಎನ್ನಬಹುದು.
ಪತ್ರಿಕೋದ್ಯಮಿ ಬೆಳೆದು ಬಂದ ಹಾದಿ :
೨೨/೦೭/೧೯೬೮ ರಂದು ಗೋಕಾಕದಲ್ಲಿ ಜನಿಸಿದ ಇವರು ತಂದೆಯ ಗರಡಿಯಲ್ಲೇ ಸಮದರ್ಶಿ ಮೂಲಕ ಅವರ ಪತ್ರಿಕೋದ್ಯಮ ಪಯಣ ಆರಂಭಿಸಿದರು. ಗೋಕಾಕದಲ್ಲಿ ೨೪/೧೦/೧೯೫೭, ದೀಪಾವಳಿ ದಿನದಂದು ಆರಂಭವಾದ ಪತ್ರಿಕೆ ಬೆಳಗಾವಿಯಿಂದ ಮುದ್ರಣಗೊಳ್ಳುತ್ತಿದೆ. ೧೯೯೭ ರಿಂದ ಸಂಪಾದಕರಾಗಿ ಸೇವೆ ಪ್ರಾರಂಭಿಸಿ ಕಳೆದ ೨೬ ವರ್ಷಗಳಿಂದ
೦೫/೦೧/೧೯೯೯ ರಿಂದ ಸಮದರ್ಶಿ ದಿನಪತ್ರಿಕೆಯ ಸಂಪಾದಕ, ಪ್ರಕಾಶಕ, ಮುದ್ರಕರಾಗಿ ಸೇವೆಗೈಯುತ್ತಿದ್ದಾರೆ.
MA, PGDM ಪದವೀಧರರಾದ ಇವರು ಗೋಕಾಕದ ಮುಪ್ಪಯ್ಯನಮಠದಲ್ಲಿ ಕನ್ನಡ ಪ್ರಾಥಮಿಕ, ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿ ಬೆಳಗಾವಿಯ ಲಿಂಗರಾಜ ಕಾಲೇಜಿನಿಂದ ಬಿಎ ಪದವಿ, ಪುಣೆ ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆದಿದ್ದಾರೆ. ರಾಜೇಂದ್ರ ಪ್ರಸಾದ ಇನಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ & ಮ್ಯಾನೇಜಮೆಂಟ್, ಬಾಂಬೆ
PGDM ಮುಗಿಸಿದ್ದಾರೆ. ಕನ್ನಡ, ಹಿಂದಿ, ಇಂಗ್ಲೀಷ, ರಶಿಯನ್ ಸೇರಿ ಚತುರ ಭಾಷಾ ಪ್ರವೀಣರಾಗಿರುವ ಇವರು ರಶಿಯಾ ರಾಜಧಾನಿ ಮಾಸ್ಕೋದಲ್ಲಿ ರಶಿಯನ್ ಭಾಷೆಯ ಒಂದು ವರ್ಷದ ಡಿಪ್ಲೋಮಾ ಪಡೆದುಕೊಂಡಿದ್ದಾರೆ.
ಸ್ವಾತಂತ್ರ್ಯ ಯೋಧರು, ಕರ್ನಾಟಕ ಏಕೀಕರಣ ಚಳವಳಿ, ಗೋವಾ ವಿಮೋಚನಾ ಚಳವಳಿಯಲ್ಲಿ ಭಾಗಿಯಾಗಿದ್ದ ಸಮದರ್ಶಿ ಸಂಸ್ಥಾಪಕ ಸಂಪಾದಕ : ದಿವಂಗತ ಬಿ. ಎನ್. ಧಾರವಾಡಕರ ಅವರ ಕಿರಿಯ ಸುಪುತ್ರರು.