ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಗೆ ಮತ್ತೆ ಯುವ ಹಾಗೂ ದಕ್ಷ ಅಧಿಕಾರಿ ಸಾರಥ್ಯ ವಹಿಸಿಕೊಂಡಿದ್ದಾರೆ.
ರಾಜ್ಯದ ಎರಡನೇ ರಾಜಧಾನಿ ಎಂದೇ ಗುರುತಿಸಿಕೊಂಡಿರುವ ಬೆಳಗಾವಿಯ ಪ್ರತಿಷ್ಠಿತ ಮಹಾನಗರ ಪಾಲಿಕೆ ಆಯುಕ್ತರಾಗಿ ಅಶೋಕ ದುಡಗುಂಟಿ ಇದೀಗ ಮತ್ತೆ ಅಧಿಕಾರ ಸ್ವೀಕರಿಸಿದ್ದಾರೆ.
ಈ ಹಿಂದೆ ಅವರು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾಗಿ, ಅಪರ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಹೀಗಾಗಿ ಬೆಳಗಾವಿ ನಗರ ಹಾಗೂ ಜಿಲ್ಲೆಯ ಬಗ್ಗೆ ಅವರಿಗೆ ಹಿಡಿತ ಇದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತವರು ಜಿಲ್ಲೆಯಾದ ಕಾರಣ ಬೆಳಗಾವಿಯಿಂದ ಅವರು ರಾಯಚೂರು ಅಪರ ಜಿಲ್ಲಾಧಿಕಾರಿ ಹುದ್ದೆಗೆ ವರ್ಗಾವಣೆಗೊಂಡಿದ್ದರು. ಇದೀಗ ಲೋಕಸಭಾ ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮತ್ತೆ ಅವರನ್ನು ಬೆಳಗಾವಿ ಮಹಾನಗರ ಪಾಲಿಕೆಯ ಪ್ರತಿಷ್ಠಿತ ಹುದ್ದೆಗೆ ನೇಮಕ ಮಾಡಿದೆ. ಅಶೋಕ ದುಡಗುಂಟಿ ಅವರು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾಗಿದ್ದಾಗ ಪಾಲಿಕೆ ಆಡಳಿತಕ್ಕೆ ಹೊಸ ಚೈತನ್ಯ ನೀಡಿದ್ದರು. ಮಾತ್ರವಲ್ಲ, ಜಿಡ್ಡು ಹಿಡಿದ ಆಡಳಿತಕ್ಕೆ ಹೊಸ ಸ್ಪರ್ಶ ನೀಡಿದ್ದರು. ನಸುಕಿನಲ್ಲೇ ಎದ್ದು ಮಹಾನಗರ ಪಾಲಿಕೆಯ ಸ್ವಚ್ಛತೆ ಕೆಲಸಗಳ ಮೇಲೆ ಹದ್ದಿನ ಕಣ್ಣಿಟ್ಟು ಗಮನ ಸೆಳೆದಿದ್ದರು. ಸ್ಮಾರ್ಟ್ ಸಿಟಿಯಾಗಿ ಹೊರಹೊಮ್ಮುತ್ತಿರುವ ಬೆಳಗಾವಿ ಮಹಾನಗರಕ್ಕೆ ಇದೀಗ ಯುವ ಹಾಗೂ ದಕ್ಷ ಅಧಿಕಾರಿ ಮತ್ತೆ ಆಯುಕ್ತರಾಗಿ ಆಗಮಿಸಿರುವುದು ಬೆಳಗಾವಿ ಜನತೆಯಲ್ಲಿ ಹೊಸ ಆಶಾಭಾವ ಮೂಡಲು ಕಾರಣವಾಗಿದೆ.