ಬೆಳಗಾವಿ : ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಗಳಲ್ಲಿಯ ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರನ್ನು ನೇಮಿಸುವ ಮೂಲಕ ಕನ್ನಡಿಗರ ಸಂಸ್ಕೃತಿ ಮತ್ತು ಪರಂಪರೆಯ ಹಾಳು ಮಾಡುತ್ತಿರುವ ಮಹಾರಾಷ್ಟ್ರ ಸರಕಾರದ ಕನ್ನಡ ವಿರೋಧಿ ನೀತಿಯನ್ನು ಪ್ರತಿಭಟಿಸುವ ಕುರಿತು ಈಗ ಕನ್ನಡಿಗರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಈ ಬಗ್ಗೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹಾಗೂ ಇತರರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕ ಸರಕಾರವು ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಎಲ್ಲ ಮರಾಠಿ ಶಾಲೆಗಳಿಗೆ ಸರ್ವ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದೆ. ರಾಜ್ಯದಲ್ಲಿ ಭಾಷಾ ಅಲ್ಪ ಸಂಖ್ಯಾತರ ಹಿತವನ್ನು ಗಮನದಲ್ಲಿಟ್ಟುಕೊಂಡು ಮರಾಠಿ ಭಾಷಿಕರ ಶಾಲೆಗಳಿಗೆ ಮರಾಠಿ ಶಿಕ್ಷಕರನ್ನೇ ನೇಮಿಸುತ್ತ ಬಂದಿದೆ. ಇದಕ್ಕೆ ತದ್ವಿರುದ್ಧವಾಗಿ ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಗಳ ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರನ್ನು ನೇಮಿಸುವ ಮೂಲಕ ಅಲ್ಲಿಯ ಕನ್ನಡಿಗರ ಹಿತಕ್ಕೆ ಧಕ್ಕೆ ತರುವಂಥ ಕನ್ನಡಿಗರ ಹಾಗೂ ಕನ್ನಡ ವಿರೋಧಿ ನಿಲುವನ್ನು ಮಹಾರಾಷ್ಟ್ರ ಸರಕಾರ ತಳೆಯುತ್ತಿದೆ. ಸಾಂಗ್ಲಿ ಜಿಲ್ಲಾ ಪಂಚಾಯತಿಯು ಇತ್ತೀಚೆಗೆ ಕನ್ನಡ ಶಾಲೆಗಳಿಗಾಗಿ ನೇಮಕ ಮಾಡಿದ 24 ಶಿಕ್ಷಕರ ಪೈಕಿ ಕೇವಲ ನಾಲ್ವರು ಮಾತ್ರ ಕನ್ನಡಿಗರಾಗಿದ್ದಾರೆ. ಕನ್ನಡ ಡಿ.ಎಡ್. ಪದವಿ ಪಡೆದ ನೂರಾರು ಶಿಕ್ಷಕರು ಕನ್ನಡ ಪ್ರದೇಶಗಳಲಿದ್ದು ಅವರನ್ನು ಕನ್ನಡ ಶಾಲೆಗಳಿಗೆ ನೇಮಕ ಮಾಡದೇ ಮರಾಠಿ ಶಿಕ್ಷಕರನ್ನು ನೇಮಕ ಮಾಡುತ್ತಿರುವ ಅಲ್ಲಿಯ ಸರಕಾರದ ಕ್ರಮವು ದುರದ್ದೇಶಪೂರಿತವಾಗಿದೆ. ಈ ಕ್ರಮದ ವಿರುದ್ಧ ಅಲ್ಲಿಯ ಕನ್ನಡಿಗರು, ಕನ್ನಡ ಸಂಘಟನೆಗಳು ತೀವ್ರ ಆಕ್ರೋಶ, ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ.
ಅವರ ಬೆನ್ನಿಗೆ ಕರ್ನಾಟಕ ಸರಕಾರ ಗಟ್ಟಿಯಾಗಿ ನಿಲ್ಲಬೇಕಾಗಿದೆ. ಅಲ್ಲದೇ ಮಹಾರಾಷ್ಟ್ರ ಸರಕಾರಕ್ಕೆ ಕರ್ನಾಟಕ ಸರಕಾರ ತನ್ನ ಸೂಕ್ತ ಹಾಗೂ ಸಮಂಜಸವಾದ ಪ್ರತಿಭಟನೆಯನ್ನು ತಿಳಿಸಬೇಕು. ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರನ್ನೊಳಗೊಂಡ ನಿಯೋಗವನ್ನು ಮಹಾರಾಷ್ಟ್ರಕ್ಕೆ ಕಳುಹಿಸಿ ಸಮಗ್ರವಾದ ವರದಿಯೊಂದನ್ನು ತಾವು ತರಿಸಿಕೊಂಡು ಮಹಾರಾಷ್ಟ್ರ ಸರಕಾರದ ಗಮನಕ್ಕೆ ತರುವ ಮೂಲಕ ಅಲ್ಲಿಯ ಕನ್ನಡಿಗರ ಹಿತರಕ್ಷಣೆಗೆ ಕ್ರಮ ಕೈಕೊಳ್ಳುವಂತೆ ಒತ್ತಾಯಿಸಬೇಕೆಂದು ಕೋರುತ್ತೇವೆ ಎಂದು ಬೆಳಗಾವಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಹಾಗೂ ಸದಸ್ಯರು ಪತ್ರ ಬರೆದು ಕರ್ನಾಟಕ ಸರಕಾರಕ್ಕೆ ಮಹಾರಾಷ್ಟ್ರ ಧೋರಣೆಯನ್ನು ಮನವರಿಕೆ ಮಾಡಿದ್ದಾರೆ.