ಬೆಳಗಾವಿ :
ಗಡಿ ವಿವಾದ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳೊಂದಿಗೆ ನಿನ್ನೆ ಸಭೆ ನಡೆಸಿದ್ದು, ಮಹಾ ದಾವೆ ಕುರಿತ ಕೇಂದ್ರದ ತಟಸ್ಥ ನಿಲುವಿಗೆ ಬೆಳಗಾವಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆಕ್ಷೇಪಿಸಿದ್ದಾರೆ.
ಬುಧವಾರ ಡಿಸೆಂಬರ್ 14 ರಂದು ದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಆಮಿತ್ ಶಹಾ ಅವರು ಗಡಿ ವಿವಾದ ಸಂಬಂಧ ಕರ್ನಾಟಕ ಮಹಾರಾಷ್ಟ್ರ
ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಸಭೆ ನಡೆಸಿ ಕೆಲವು ನಿರ್ಧಾರಗಳನ್ನು ಕೈಗೊಂಡಿದ್ದು ಈ ಸಂಬಂಧ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಪ್ರತಿಕ್ರಿಯೆ ಕೆಳಗಿನಂತಿದೆ:
1)ಸರ್ವೋನ್ನತ ನ್ಯಾಯಾಲಯದ ಮುಂದಿರುವ ಗಡಿ ವಿವಾದ ಪ್ರಕರಣದ ತೀರ್ಪು ಪ್ರಕಟವಾಗುವವರೆಗೂ ಉಭಯ ರಾಜ್ಯಗಳು ಪರಸ್ಪರರ ಪ್ರದೇಶಗಳ ಸಂಬಂಧ ಬೇಡಿಕೆ ಇಡಬಾರದು ಎಂದು ಸಭೆಯಲ್ಲಿ ಒಮ್ಮತಕ್ಕೆ ಬರಲಾಗಿದೆ. ಈ ನಿರ್ಣಯದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯು ಬೆಳಗಾವಿಯಲ್ಲಿ ನಡೆಸುವ ಯಾವದೇ ಕರ್ನಾಟಕ ವಿರೋಧಿ ಚಟುವಟಿಕೆಗಳನ್ನು ಮಹಾರಾಷ್ಟ್ರ ಸರಕಾರ ಅಥವಾ ಅಲ್ಲಿಯ ನಾಯಕರು ಬೆಂಬಲಿಸಬಾರದು. ಅಲ್ಲದೇ ಸಮಿತಿಯು ನಡೆಸುವ ಮಹಾ ಮೇಳಾವಾದಂತಹ
ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ.
2)ಸರ್ವೋನ್ನತ ನ್ಯಾಯಾಲಯದ ಮುಂದಿರುವ ಮಹಾರಾಷ್ಟ್ರದ ದಾವೆಯಲ್ಲಿ ಕೇಂದ್ರ ಸರಕಾರ ತಟಸ್ಥ ನಿಲುವನ್ನು ತಳೆಯಬೇಕು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಉಪ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಅವರು ಕೇಂದ್ರವನ್ನು ನಿನ್ನೆಯ ಸಭೆಯಲ್ಲಿ ಒತ್ತಾಯಿಸಿದ್ದು ಇದಕ್ಕೆ ಆಮಿತ್ ಶಹಾ
ಅವರು ಒಪ್ಪಿದ್ದಾರೆ ಎಂದು ಶಿಂಧೆ ಹಾಗೂ ಫಡ್ನವೀಸ್ ನಿನ್ನೆ ಶಹಾ ಸಭೆಯ ನಂತರ ಮಾಧ್ಯಮಕ್ಕೆ ವಿವರಿಸಿದ್ದು ಕರ್ನಾಟಕದ ಪಾಲಿಗೆ ಒಳ್ಳೆಯ ಬೆಳವಣಿಗೆಯಲ್ಲ.
ಮಹಾರಾಷ್ಟ್ರವು 2004 ರಲ್ಲಿ ದಾಖಲಿಸಿದ ಮೂಲ ದಾವೆಯಲ್ಲಿ ಕೇಂದ್ರವು ಮೊದಲ ಪ್ರತಿವಾದಿಯಾಗಿದ್ದು ಕರ್ನಾಟಕವು ಎರಡನೇ ಪ್ರತಿವಾದಿಯಾಗಿದೆ. ಸಂವಿಧಾನದ ಮೂರನೇ ವಿಧಿಯ ಪ್ರಕಾರ ರಾಜ್ಯದ ಗಡಿಗಳನ್ನು ನಿರ್ಧರಿಸುವ, ಗಡಿಗಳನ್ನು ವಿಸ್ತರಿಸುವ ಅಥವಾ ಒಂದು ರಾಜ್ಯದ ಪ್ರದೇಶಗಳನ್ನು ಮತ್ತೊಂದು ರಾಜ್ಯಗಳಿಗೆ ವರ್ಗಾಯಿಸುವ ಪರಮಾಧಿಕಾರ ಸಂಸತ್ತಿಗೆ ಮಾತ್ರ ಇದೆ. 1956 ರ ರಾಜ್ಯ ಪುನರ್ ವಿಂಗಡನೆ ಕಾಯ್ದೆ ರಚಿಸಿದ್ದೂ ಕೇಂದ್ರವೇ,1966 ರಲ್ಲಿ ಮೆಹರ್ ಚಂದ ಮಹಾಜನ ಆಯೋಗವನ್ನು
ನೇಮಿಸಿದ್ದೂ ಕೇಂದ್ರವೇ.ಈ ವಾಸ್ತವವನ್ನು ಕೇಂದ್ರ ಸರಕಾರವು ಸರ್ವೋನ್ನತ ನ್ಯಾಯಾಲಯದ ಮುಂದೆ ಮೊದಲ ಪ್ರತಿವಾದಿಯಾಗಿ ಸ್ಪಷ್ಟ ನಿಲುವನ್ನು ತಳೆಯಲೇಬೇಕಾಗುತ್ತದೆ. ಮಹಾರಾಷ್ಟ್ರದ ಬೇಡಿಕೆಯಂತೆ ತಟಸ್ಥ ನಿಲುವು ತಳೆಯುವದು ಅಸಾಧ್ಯದ ಮಾತು.ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರಕಾರಕ್ಕೆ ಸ್ಪಷ್ಟ ಶಬ್ಧಗಳಲ್ಲಿ ತಿಳಿಸಬೇಕಾಗುತ್ತದೆ.
3)ಉಭಯ ರಾಜ್ಯಗಳ ತಲಾ ಮೂವರು ಸಚಿವರುಗಳುಳ್ಳ ಆರು ಸಚಿವರ ಸಮಿತಿ ರಚಿಸಲು ನಿನ್ನೆಯ ಸಭೆಯಲ್ಲಿ ತೀರ್ಮಾನಿಸಿದ್ದು ಒಳ್ಳೆಯ ಹೆಜ್ಜೆ. ಕರ್ನಾಟಕದಲ್ಲಿ 2018 ರಿಂದಲೂ
ಗಡಿ ಉಸ್ತುವಾರಿ ಸಚಿವರೇ ಇರಲಿಲ್ಲ. ಈ ಬಗ್ಗೆ ಅನೇಕ ಬಾರಿ ಆಗ್ರಹಿಸಿದರೂ ಗಡಿ ಉಸ್ತುವಾರಿ ಸಚಿವರ ನೇಮಕ ಆಗಿರಲಿಲ್ಲ. ಈಗಲಾದರೂ ಬೊಮ್ಮಾಯಿ ಸರಕಾರ ಆಮಿತ್ ಶಹಾ ಅವರ
ಸೂಚನೆಯ ಮೇರೆಗೆ ಈ ದಿಸೆಯತ್ತ ನೇಮಕ ಮಾಡಲಿದೆ.
4)ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಿರಿಯ ಐಪಿಎಸ್ ಅಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸುವ ಬದಲಾಗಿ ಉಭಯ ರಾಜ್ಯಗಳ ತಲಾ ಒಬ್ಬರು ಸೇರಿ ಇಬ್ಬರು
ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಇಂಥ ಸಮಿತಿ ರಚನೆಯಾಗಬೇಕು.
5)ಬೆಳಗಾವಿಗೆ ಭೆಟ್ಟಿ ನೀಡಲಿದ್ದ ಮಹಾರಾಷ್ಟ್ರದ ಇಬ್ಬರು ಗಡಿ ಉಸ್ತುವಾರಿ ಸಚಿವರ ಪ್ರವೇಶವನ್ನು ನಿರ್ಬಂಧಿಸಿದ್ದನ್ನು ಮಹಾರಾಷ್ಟ್ರ ಮುಖ್ಯಮಂತ್ರಿಗಳು ನಿನ್ನೆಯ ಸಭೆಯಲ್ಲಿ ಆಕ್ಷೇಪಿಸಿದ್ದಾರೆ.ಇದಕ್ಕೆ ಬೊಮ್ಮಾಯಿ ಅವರು ತಕ್ಕ ಉತ್ತರ ನೀಡಿದ್ದಾರೆ.ಇನ್ನು ಮುಂದೆ ಯಾವದೇ
ಸಚಿವರು ಬೆಳಗಾವಿಗೆ ಬರುವದಕ್ಕೆ ತಡೆ ಒಡ್ಡುವದಿಲ್ಲವೆಂದೂ ಬೊಮ್ಮಾಯಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ತ್ವೇಷಮಯ ವಾತಾವರಣವಿದ್ದಾಗ ಮಾತ್ರ ಮಹಾರಾಷ್ಟ್ರ ಸಚಿವರಿಗೆ ನಿರ್ಬಂಧ ವಿಧಿಸಲಾಗಿದೆ. ಇನ್ನು ಮುಂದೆ ಮಹಾರಾಷ್ಟ್ರದ ಸಚಿವರು ಬೆಳಗಾವಿ ಗಡಿ ಭಾಗದಲ್ಲಿ ಮ.ಏ. ಸಮಿತಿ ಅಥವಾ ಶಿವಸೇನಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ
ಕರ್ನಾಟಕದ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡುವದಾದರೆ ಕರ್ನಾಟಕ ಸರಕಾರ ಆಕ್ಷೇಪಿಸಬೇಕಲ್ಲದೇ ಕೇಂದ್ರ ಗೃಹ ಸಚಿವರ ಗಮನಕ್ಕೆ ತರಬೇಕು.
6)ಗಡಿವಿವಾದವು ಸಂವಿಧಾನದ ನಿಯಮಗಳ ಪ್ರಕಾರವೇ ಬಗೆಹರಿಯಬೇಕೇ ಹೊರತು ಬೀದಿಗಳಲ್ಲಿ ಅಲ್ಲ ಎಂಬ ಆಮಿತ್ ಶಾ ಅವರ ಹೇಳಿಕೆ ಅತ್ಯಂತ ಸಮಂಜಸವಾಗಿದೆ. ಸರ್ವೋನ್ನತ ನ್ಯಾಯಾಲಯದಲ್ಲೂ ಇದೇ ನಿಲುವನ್ನು ಕೇಂದ್ರವು ಸ್ಪಷ್ಟವಾಗಿ,ಲಿಖಿತ ರೂಪದಲ್ಲಿ ಹೇಳಬೇಕು.1956 ರ ರಾಜ್ಯ
ಪುನರ್ ವಿಂಗಡನಾ ಕಾನೂನನ್ನು 50 ವರ್ಷಗಳ ನಂತರ ಮಹಾರಾಷ್ಟ್ರವು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು ಕಾಲಬಾಹ್ಯ ಹಾಗೂ ಅಸಂಬದ್ಧವಾಗಿದೆ ಎಂದೂ ವಾದಿಸಬೇಕು.
ನಿನ್ನೆಯ ಆಮಿತ್ ಶಹಾ ಅವರು ನೀಡಿರುವ ಸೂಚನೆಗಳನ್ನು ಮತ್ತು ಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ ಮಹಾರಾಷ್ಟ್ರವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಗಡಿಭಾಗದ ಕನ್ನಡಿಗರು ಕಾದು ನೋಡಲಿದ್ದಾರೆ ಎಂದು ಅಶೋಕ ಚಂದರಗಿ ಅವರು ತಿಳಿಸಿದ್ದಾರೆ.