ನವದೆಹಲಿ: ನಮ್ಮ ಕಾಂತಾರ-ಚಾಪ್ಟರ್ 1 ಚಿತ್ರವು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿದೆ. ಪ್ರಾದೇಶಿಕ ಸಿನಿಮಾವೂ ಸಾರ್ವತ್ರಿಕವಾಗಬಹುದು ಎಂಬ ನನ್ನ ನಂಬಿಕೆ ಗೆದ್ದಿದೆ ಎಂದು ಚಿತ್ರದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಬುಧವಾರ ತಿಳಿಸಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2022ರಲ್ಲಿ ಬಿಡುಗಡೆಯಾದ ಕಾಂತಾರ ಚಿತ್ರದಂತೆಯೇ ಈ ಚಿತ್ರವೂ ಜನರಲ್ಲಿ ಬೇರೂರಿದೆ. ಜಾನಪದ ಮತ್ತು ಕರಾವಳಿಯ ದೈವಿಕ ಸಂಪ್ರದಾಯಗಳ ಅನ್ವೇಷಣೆ ಸಾಂಸ್ಕೃತಿಕ ವಿದ್ಯಮಾನವಾಗಿ ಮಾರ್ಪಟ್ಟಿದೆ. ಹೊಸ ಕನ್ನಡ ಚಲನಚಿತ್ರಗಳ ನಿರೂಪಣೆ ಮತ್ತು ಅಭಿನಯಕ್ಕೆ ಪ್ರಶಂಸೆಗಳು ಸಂದಿವೆ. ಜಾಗತಿಕ ಬಾಕ್ಸ್ ಆಫೀಸ್ನಲ್ಲಿ, ಕಾಂತಾರ: ಚಾಪ್ಟರ್ 1 ಬಿಡುಗಡೆಯಾಗಿ 6 ದಿನಗಳಲ್ಲಿ 427.5 ಕೋಟಿ ರೂ.ಗಳನ್ನು ಗಳಿಸುವ ಮೂಲಕ ಭರ್ಜರಿ ಯಶಸ್ಸು ಕಂಡಿದೆ ಎಂದು ಹೇಳಿದರು.
ಕಾಂತಾರ ಚಿತ್ರವನ್ನು ಆರಂಭಿಸಿದ್ದು, ಅಂದಿನಿಂದಲೂ ನಾವು ಪ್ರಕೃತಿ ಹಾಗೂ ಮನುಷ್ಯರ ನಡುವಿನ ಚಲನಶೀಲತೆಯನ್ನು ಅನ್ವೇಶಿಸುತ್ತಲೇ ಇದ್ದೆವು. ಈ ಕಥೆಯು ಕರಾವಳಿ ಕರ್ನಾಟಕದ ನಮ್ಮ ಜಾನಪದದಲ್ಲಿ ಬೇರೂರಿದೆ. ಬುಡಕಟ್ಟು ಜನಾಂಗಗಳು, ಜಾನಪದ ಮತ್ತು ದೇವತೆಗಳ ಆರಾಧನೆಯ ಬಗ್ಗೆ ಈ ಚಿತ್ರದಲ್ಲಿ ತೋರಿಸಿದ್ದು, ಅಂದಿನಿಂದ ಪ್ರಾದೇಶಿಕ ಚಿತ್ರವೂ ಸಾರ್ವತ್ರಿಕವಾಗಬಹುದು ಎಂಬ ಆಲೋಚನೆ ನನ್ನಲ್ಲಿತ್ತು. ಅದು ಇದು ನನಸಾಗಿದೆ ಎಂದು ಹೇಳಿದರು.