ಅಥಣಿ : ಭಾರತದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಮೂಡಲು ಭಗವದ್ಗೀತೆ ಕಾರಣ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತೀಯ ಸಹಸಂಘ ಚಾಲಕ ಅರವಿಂದ ರಾವ್ ದೇಶಪಾಂಡೆ ಅಭಿಪ್ರಾಯ ಪಟ್ಟಿದ್ದಾರೆ.
ಸೋಂದಾ ಸ್ವರ್ಣವಲ್ಲಿ ಮಠದಿಂದ ನಡೆಸಲಾಗುತ್ತಿರುವ ಭಗವದ್ಗೀತೆ ಅಭಿಯಾನದ ಹಿನ್ನೆಲೆಯಲ್ಲಿ ಅಥಣಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಗವದ್ಗೀತೆ ಶ್ಲೋಕದಲ್ಲಿ ವಿಜ್ಞಾನವೂ ಇದೆ, ಮ್ಯಾನೇಜ್ ಮೆಂಟ್ ಕೂಡ ಇದೆ. ಜಾಗತಿಕವಾಗಿ ಭಗವದ್ಗೀತೆಯನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ, ಅದು ಸರ್ವಮಾನ್ಯವಾದದ್ದು. ಪ್ರಧಾನಿಗಳು ಯಾವುದೇ ದೇಶಕ್ಕೆ ಹೋದರೂ ಭಗವದ್ಗೀತೆ ಕೊಡುತ್ತಾರೆ. ಇಂದು ಅಮೇರಿಕಾದಲ್ಲಿ ವಿದ್ಯಾರ್ಥಿಗಳು ಭಗವದ್ಗೀತೆ ಕಂಠ ಪಾಠ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಭಗವದ್ಗೀತೆ ಕೇಳಲು ನಾವು ಅಮೇರಿಕಾಕ್ಕೆ ಹೋಗಬೇಕಾದ ಪರಿಸ್ಥಿತಿ ಬಂದೀತು ಎಂದು ಅವರು ಎಚ್ಚರಿಸಿದರು.
ಭಗವದ್ಗೀತೆ ರಾಜ್ಯಮಟ್ಟದ ಸಮಿತಿಯ ಕಾರ್ಯಾಧ್ಯಕ್ಷ ಪರಮೇಶ್ವರ ಹೆಗಡೆ ಅಭಿಯಾನದ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ಪ್ರತಿ ತಾಲೂಕಿನಲ್ಲೂ ನವೆಂಬರ್ 21ರಿಂದ ಡಿಸೆಂಬರ್ 23ರ ವರೆಗೆ ಭಗವದ್ಗೀತೆ ಅಭಿಯಾನ ನಡೆಯಲಿದೆ. ಅದಕ್ಕೂ ಪೂರ್ವ ಪ್ರಶಿಕ್ಷಣ ನಡೆಸಲಾಗುವುದು. ಎಲ್ಲ ತಾಲೂಕುಗಳಲ್ಲಿ ಸಮಿತಿಗಳನ್ನು ರಚಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ರಾಜ್ಯ ಸಮಿತಿಯ ಕಾರ್ಯದರ್ಶಿ ಎಂ.ಕೆ.ಹೆಗಡೆ, ಅಥಣಿ ತಾಲೂಕು ಸಮಿತಿ ಅಧ್ಯಕ್ಷ ಸುಹಾಸ ದಾತಾರ, ಉಪಾಧ್ಯಕ್ಷ ಅನಿಲರಾವ್ ದೇಶಪಾಂಡೆ ಮೊದಲಾದವರಿದ್ದರು.
ಆರ್.ಎ.ಜೋಶಿ ಸ್ವಾಗತಿಸಿದರು. ಎಸ್.ಬಿ.ಇಂಗಳಿ ಪ್ರಾಸ್ತಾವಿಕ ಮಾತನಾಡಿದರು. ಇದೇ ವೇಳೆ ಅಥಣಿ ತಾಲೂಕು ಸಮಿತಿಯನ್ನು ರಚನೆ ಮಾಡಲಾಯಿತು.