ಮುಂಬೈ: ಮುಂಬೈನ ನಿವಾಸದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರನ್ನು ಚಾಕುವಿನಿಂದ ಇರಿದ ಆರೋಪದ ಮೇಲೆ ಮಹಾರಾಷ್ಟ್ರದ ಥಾಣೆಯಲ್ಲಿ ವ್ಯಕ್ತಿಯೊಬ್ಬನನ್ನು ಇಂದು, ಭಾನುವಾರ ಮುಂಜಾನೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು 30 ವರ್ಷದ ಮೊಹಮ್ಮದ್ ಶರೀಫುಲ್ ಇಸ್ಲಾಂ ಶಹಜಾದ್ ಎಂದು ಗುರುತಿಸಲಾಗಿದ್ದು, ಈತ ಬೇರೆಬೇರೆ ಹೆರನ್ನು ಇಟ್ಟುಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಸೈಫ್ ಅಲಿ ಖಾನ್ ಅವರ ನಿವಾಸದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ಕಾಸರ್ವದವಲಿಯ ಹಿರಾನಂದನಿ ಎಸ್ಟೇಟ್ ಬಳಿ ಈತ ಸಿಕ್ಕಿಬಿದ್ದಿದ್ದಾನೆ.
ಸೈಫ್ ಅಲಿ ಖಾನ್ ಅವರ ಕುತ್ತಿಗೆ ಮತ್ತು ಬೆನ್ನುಮೂಳೆಯ ಬಳಿ ಸೇರಿದಂತೆ ಆರು ಕಡೆ ಇರಿತದ ಗಾಯಗಳಾಗಿವೆ. ಸೈಫ್ ಅವರ ಬಾಂದ್ರಾ ಮನೆಗೆ ಒಳನುಗ್ಗಿದ್ದ ಕಳ್ಳ ಗುರುವಾರ ಮುಂಜಾನೆ ಅವರ ಮೇಲೆ ದಾಳಿ ಮಾಡಿದ್ದ.
ನಟ ಸೈಫ್ ಅಲಿಖಾನ್ ಅವರ ಮುಂಬೈ ಮನೆಗೆ ನುಗ್ಗಿ ನಟನಿಗೆ ಆರು ಬಾರಿ ಇರಿದ ಕಳ್ಳನು ಕೆಲವು ತಿಂಗಳ ಹಿಂದೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಬಾಂಗ್ಲಾದೇಶದ ಪ್ರಜೆಯಾಗಿರಬಹುದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಇಂದು, ಭಾನುವಾರ ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಉಪ ಪೊಲೀಸ್ ಆಯುಕ್ತ ದೀಕ್ಷಿತ್ ಗೆಡಮ್, ನಟನ ಬಾಂದ್ರಾ ಮನೆಯಲ್ಲಿ ಬುಧವಾರ ತಡರಾತ್ರಿ ನಡೆದ ಕಳ್ಳತನ ಯತ್ನಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು. ಆರೋಪಿಯನ್ನು ಮೊಹಮ್ಮದ್ ಶರಿಫುಲ್ ಇಸ್ಲಾಂ ಶೆಹಜಾದ್ ಎಂದು ಗುರುತಿಸಲಾಗಿದೆ. “ಈ ಆರೋಪಿ ಬಾಂಗ್ಲಾದೇಶದವನಾಗಿರಬಹುದು ಎಂದು ತನಿಖೆಯಿಂದ ತಿಳಿದುಬಂದಿದೆ. ಆತನ ಬಳಿ ಯಾವುದೇ ಭಾರತೀಯ ದಾಖಲೆಗಳಿಲ್ಲ. ಆತ ಬಾಂಗ್ಲಾದೇಶದವನೆಂದು ನಾವು ಅನುಮಾನಿಸುತ್ತೇವೆ, ನಾವು ತನಿಖೆ ನಡೆಸುತ್ತಿದ್ದೇವೆ ಮತ್ತು ಆತನ ವಿರುದ್ಧದ ಪ್ರಕರಣಕ್ಕೆ ಪಾಸ್ಪೋರ್ಟ್ ಕಾಯ್ದೆಯ ಆರೋಪಗಳನ್ನು ಸೇರಿಸಿದ್ದೇವೆ” ಎಂದು ಹಿರಿಯ ಅಧಿಕಾರಿ ಹೇಳಿದರು. ಆರೋಪಿ ದರೋಡೆ ಮಾಡಲು ನಟನ ಮನೆಗೆ ಪ್ರವೇಶಿಸಿದ್ದ ಎಂದು ತಿಳಿಸಿದರು.
“ನಾವು ಆತನಿಂದ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ, ಇದು ಆತ ಬಾಂಗ್ಲಾದೇಶದಿಂದ ಬಂದವನು ಎಂದು ಸೂಚಿಸುತ್ತದೆ. ಆತ ಅಕ್ರಮವಾಗಿ ಭಾರತಕ್ಕೆ ಬಂದು ಬಿಜೋಯ ದಾಸ್ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದಾನೆ. ಆತ ಸುಮಾರು ನಾಲ್ಕು ತಿಂಗಳಿನಿಂದ ಮುಂಬೈನಲ್ಲಿ ವಾಸಿಸುತ್ತಿದ್ದಾನೆ ಮತ್ತು ಹೌಸ್ ಕೀಪಿಂಗ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಾನೆ” ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಸೈಫ್ ಅಲಿಖಾನ್ ಅವರಿಗೆ ಆರು ಬಾರಿ ಚಾಕುವಿನಿಂದ ಇರಿದಿದ್ದು, ಅವರನ್ನು ಆಟೋರಿಕ್ಷಾದಲ್ಲಿ ನಗರದ ಲೀಲಾವತಿ ಆಸ್ಪತ್ರೆಗೆ ಸಾಗಿಸಿ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಐದು ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ನಂತರ ಅವರ ಬೆನ್ನುಮೂಳೆಯಿಂದ 2.5-ಇಂಚಿನ ಬ್ಲೇಡ್ ಅನ್ನು ತೆಗೆದುಹಾಕಲಾಯಿತು. 54 ವರ್ಷದ ನಟ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
ಶನಿವಾರ ಮುಂಜಾನೆ, ಮುಂಬೈ ಮೂಲದ 31 ವರ್ಷದ ಶಂಕಿತನನ್ನು ಛತ್ತೀಸ್ಗಢದ ದುರ್ಗ್ ರೈಲು ನಿಲ್ದಾಣದಲ್ಲಿ ಬಂಧಿಸಲಾಯಿತು.ಮುಂಬೈ ಪೊಲೀಸರ ನೇತೃತ್ವದ ಮೇರೆಗೆ ಮುಂಬೈ-ಹೌರಾ ಜ್ಞಾನೇಶ್ವರಿ ಎಕ್ಸ್ಪ್ರೆಸ್ನಿಂದ ಆತನನ್ನು ಹಿಡಿಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಮಧ್ಯಾಹ್ನ 2 ಗಂಟೆಯ ಸುಮಾರಿಗೆ, ರೈಲು ದುರ್ಗವನ್ನು ತಲುಪಿದಾಗ, ಶಂಕಿತ – ಜನರಲ್ ಕಂಪಾರ್ಟ್ಮೆಂಟ್ನಲ್ಲಿ ಕುಳಿತಿದ್ದ – ಡಿಬೋರ್ಡಿಂಗ್ ಮಾಡಿ ತಕ್ಷಣ ವಶಕ್ಕೆ ತೆಗೆದುಕೊಳ್ಳಲಾಗಿದೆ. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ” ಎಂದು ರೈಲ್ವೇ ರಕ್ಷಣಾ ಪಡೆ (ಆರ್ಪಿಎಫ್) ಅಧಿಕಾರಿಗಳು ತಿಳಿಸಿದ್ದಾರೆ.
“ಮುಂಬೈ ಪೊಲೀಸರು ಶಂಕಿತನ ಫೋಟೋ, ರೈಲು ಸಂಖ್ಯೆ ಮತ್ತು ಸ್ಥಳವನ್ನು ಆರ್ಪಿಎಫ್ಗೆ ಕಳುಹಿಸಿದ್ದರು, ನಂತರ ಆತನನ್ನು ಹಿಡಿಯಲಾಯಿತು” ಎಂದು ಅವರು ಹೇಳಿದರು. ವ್ಯಕ್ತಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ.
ಸೈಫ್ ಅಲಿ ಖಾನ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ – ಅವರ ಪತ್ನಿ ಕರೀನಾ ಕಪೂರ್ ಮತ್ತು ಅವರ ಇಬ್ಬರು ಪುತ್ರರಾದ ನಾಲ್ಕು ವರ್ಷದ ಜೆಹ್ ಮತ್ತು ಎಂಟು ವರ್ಷದ ತೈಮೂರ್ ಜೊತೆಗೆ ಬಾಂದ್ರಾದ 12 ಮಹಡಿಗಳ ಶರಣ ಸದ್ಗುರು ಅಪಾರ್ಟ್ಮೆಂಟ್ನಲ್ಲಿರುವ ಅವರ ನಿವಾಸದಲ್ಲಿದ್ದಾಗ ದಾಳಿಗೆ ಒಳಗಾಗಿದ್ದರು.
ಜೆಹ್ ನನ್ನು ನೋಡಿಕೊಳ್ಳುವ ನರ್ಸ್ ಎಲಿಯಾಮಾ ಫಿಲಿಪ್ ಮತ್ತು ಇನ್ನೊಬ್ಬ ಸಿಬ್ಬಂದಿ ದಾಳಿಯಲ್ಲಿ ಗಾಯಗೊಂಡಿದ್ದಾರೆ.
ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, 11 ನೇ ಮಹಡಿಯಲ್ಲಿರುವ ಖಾನ್ ಅವರ ಅಪಾರ್ಟ್ಮೆಂಟ್ನಲ್ಲಿ 35-40 ವರ್ಷ ವಯಸ್ಸಿನ ಒಳನುಗ್ಗಿದ ವ್ಯಕ್ತಿಯನ್ನು ಗುರುತಿಸಿದ ಮೊದಲ ವ್ಯಕ್ತಿ ತಾನು ಎಂದು ಶ್ರೀಮತಿ ಫಿಲಿಪ್ ಹೇಳಿದ್ದಾರೆ.
ಚಾಕು ಹಿಡಿದ ದಾಳಿಕೋರ 1 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದ ಎಂದು ಆಕೆ ಹೇಳಿದ್ದಾಳೆ.