ಬೆಂಗಳೂರು: ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ಸೂಪರ್ಫಾಸ್ಟ್ ರೈಲಿಗೆ ಕೇಂದ್ರ ರೈಲ್ವೆ ಸಚಿವಾಲಯದಿಂದ ಅಧಿಕೃತ ಅನುಮೋದನೆ ದೊರೆತಿದೆ. ಈ ಕುರಿತು ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು. ಈ ಅನುಮೋದನೆಯ ಮೂಲಕ ಎರಡು ಪ್ರಮುಖ ನಗರಗಳ ನಾಗರಿಕರ 30 ವರ್ಷಗಳ ಬೇಡಿಕೆ ಈಡೇರಿಸಲ್ಪಟ್ಟಿದೆ. ಬೆಂಗಳೂರು ಮತ್ತು ಮುಂಬೈ ಎರಡೂ ಪ್ರಮುಖ ಆರ್ಥಿಕ ಕೇಂದ್ರಗಳಾಗಿರುವುದರಿಂದ, ವೇಗವಾದ ಮತ್ತು ಅನುಕೂಲಕರ ರೈಲು ಸಂಪರ್ಕವು ದೀರ್ಘಕಾಲದಿಂದಲೂ ಅತ್ಯವಶ್ಯಕತೆ ಎನ್ನಲಾಗುತ್ತಿತ್ತು.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಘೋಷಣೆ ಮಾಡಿದ್ದು “ಬೆಂಗಳೂರು ಮತ್ತು ಮುಂಬೈ ನಡುವೆ ಶೀಘ್ರದಲ್ಲೇ ಸೂಪರ್ಫಾಸ್ಟ್ ರೈಲನ್ನು ಪ್ರಾರಂಭಿಸಲಾಗುತ್ತದೆ. ಎರಡೂ ನಗರಗಳ ನಿಲ್ದಾಣಗಳಲ್ಲಿ ಸಾಮರ್ಥ್ಯ ವಿಸ್ತರಣೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿರುವುದರಿಂದ ಈ ಯೋಜನೆ ಸಾಧ್ಯವಾಗಿದೆ” ಎಂದು ತಿಳಿಸಿದ್ದಾರೆ ಎಂದು ತೇಜಸ್ವಿ ಸೂರ್ಯ ಸ್ಪಷ್ಟಪಡಿಸಿದ್ದಾರೆ.
ಈ ಹೊಸ ಸೂಪರ್ಫಾಸ್ಟ್ ರೈಲು ಎರಡು ನಗರಗಳ ನಡುವಿನ ಸಂಚಾರವನ್ನು ವೇಗವಾಗಿ, ಸುಗಮವಾಗಿ ಮಾಡುವ ನಿರೀಕ್ಷೆಯಿದೆ. ವ್ಯಾಪಾರ, ಉದ್ಯಮ, ಉದ್ಯೋಗ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಿಗೆ ಈ ಸಂಪರ್ಕವು ಬಲ ನೀಡಲಿದೆ. ನಾಗರಿಕರ ದೀರ್ಘಕಾಲದ ಆಕಾಂಕ್ಷೆ ಈಡೇರಿದ ಹಿನ್ನೆಲೆಯಲ್ಲಿ, ಈ ಘೋಷಣೆ ದೊಡ್ಡ ಮಟ್ಟದ ಸ್ವಾಗತ ಪಡೆಯುತ್ತಿದೆ.
ಬೆಂಗಳೂರು–ಮುಂಬೈ ನಡುವಿನ ರೈಲು ಸಂಪರ್ಕ ಹಳೆಯದಾದರೂ, ಪ್ರಯಾಣ ಸಮಯ ಹೆಚ್ಚು ತೆಗೆದುಕೊಳ್ಳುತ್ತಿತ್ತು. ಈ ಎರಡೂ ನಗರಗಳು ಕೇವಲ ಒಂದೇ ಒಂದು ರೈಲಿನಿಂದ ಸಂಪರ್ಕ ಹೊಂದಿದ್ದವು. ಆ ರೈಲು ಉದ್ಯಾನ ಎಕ್ಸ್ಪ್ರೆಸ್ ಆಗಿದ್ದು, ಈ ಪ್ರಯಾಣವನ್ನು ಪೂರ್ಣಗೊಳಿಸಲು 24 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಸೂಪರ್ಫಾಸ್ಟ್ ರೈಲು ಅನುಮೋದನೆಯೊಂದಿಗೆ, ಪ್ರಯಾಣ ಅವಧಿಯನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ನಿಲ್ದಾಣಗಳ ಸಾಮರ್ಥ್ಯ ವಿಸ್ತರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಕೈಗೊಳ್ಳಲಾದ ಕ್ರಮಗಳು, ಈ ಯೋಜನೆಗೆ ಬುನಾದಿ ಹಾಕಿವೆ.
ರೈಲಿನ ವೇಳಾಪಟ್ಟಿ, ನಿಲ್ದಾಣಗಳ ವಿವರ ಹಾಗೂ ಪ್ರಯಾಣ ಶುಲ್ಕ ಕುರಿತು ಶೀಘ್ರದಲ್ಲೇ ರೈಲ್ವೆ ಇಲಾಖೆ ಅಧಿಕೃತ ಪ್ರಕಟಣೆ ನೀಡುವ ನಿರೀಕ್ಷೆ ಇದೆ.


