ಬೆಂಗಳೂರು :
ರಾಜ್ಯ ಕಟಿಕ ಸಮಾಜದ ನಿಯೋಗವು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ಭೇಟಿಯಾಗಿ ತಮ್ಮ ಸಮುದಾಯದ ಹಲವು ಬೇಡಿಕೆಗಳನ್ನು ಮುಂದಿಟ್ಟು ಮಾತುಕತೆ ನಡೆಸಿತು.
ಕಟುಕ, ಕಟಿಕ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡುವಂತೆ ನಿಯೋಗ ಒತ್ತಾಯಿಸಿತು.
ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಮಂಡಿ ಸಲಾಗುವುದು ಎಂದು ಮುಖ್ಯ ಮಂತ್ರಿಗಳು ಭರವಸೆ ನೀಡಿದರು.
ಕುರಿ, ಮೇಕೆ ಮಾಂಸ ಕಡಿಯುವುದು ಸಮಾಜದ ಕಸುಬು. ಹೀಗಾಗಿ ಕಟುಕ ಎನ್ನುವ ಹೆಸರೂ ಸಮಾಜಕ್ಕೆ ಅಂಟಿಕೊಂಡಿದ್ದು, ಸಾಮಾಜಿಕವಾಗಿ ಬಹಳ ಹಿಂದುಳಿದಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಪರಿಶಿಷ್ಟ ಜಾತಿಗೆ ಕಟಿಕ ಸಮಾಜ ಸೇರಿಸಲ್ಪಟ್ಟಿದೆ. ದೆಹಲಿ, ರಾಜಸ್ತಾನ, ಉತ್ತರ ಪ್ರದೇಶ,ಮಹಾರಾಷ್ಟ್ರ ದಲ್ಲಿಯೂ ಪರಿಶಿಷ್ಟ ಜಾತಿಗೆ ಸೇರಿದೆ. 2012 ರ ಕುಲಶಾಸ್ತ್ರೀಯ ಅಧ್ಯಯನದಲ್ಲಿಯೂ ಸಮುದಾಯದ ಕುರಿತು ಸ್ಪಷ್ಟವಾಗಿ ನಮೂದಾಗಿದೆ. ಕರ್ನಾಟಕ ಕಟಿಕ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಶಿಫಾರಸ್ಸು ಮಾಡಲಾಗಿದೆ ಎಂದು ವಿವರಿಸಿದರು.
ಕಟಿಕ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಕಟಿಕ ಸಮಾಜದ ಮುಖಂಡ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ರಾಮಣ್ಣ ಮನವಿ ಮಾಡಿದರು.
ಮಾಜಿ ಶಾಸಕ ಹೆಚ್.ಎಂ.ರೇವಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಉಪಸ್ಥಿತರಿದ್ದರು.