ಬೆಳಗಾವಿ : ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಬರುವ ಮಾರ್ಚ್ ಎರಡರಂದು ಏರ್ಪಡಿಸಲಿರುವ ನಾಲ್ಕನೆಯ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನಕ್ಕೆ ಅಥಣಿಯ ಹಿರಿಯ ಸಾಹಿತಿ ಅಪ್ಪಾಸಾಹೇಬ ಅಲಿಬಾದಿ ಅವರ ಹೆಸರನ್ನು ಆಯ್ಕೆ ಸಮಿತಿಯ ನಾಲ್ವರು ಸದಸ್ಯರು ಒಮ್ಮತದಿಂದ ಶಿಫಾರಸು ಮಾಡಿದ್ದಾರೆ.
ಸರ್ವಾಧ್ಯಕ್ಷರ ಆಯ್ಕೆ ಪಾರದರ್ಶಕವಾಗಿ ನಡೆಯಬೇಕು ಮತ್ತು ಅರ್ಹರು ಆಯ್ಕೆಯಾಗಬೇಕೆಂಬ ಕಾರಣಕ್ಕಾಗಿ ಸ್ವಾಗತ ಸಮಿತಿಯ ಗೌರವ ಸಲಹೆಗಾರರಾಗಿ ೧. ಡಾ. ಪಿ. ಜಿ. ಕೆಂಪಣ್ಣವರ, ೨. ಡಾ. ವೈ. ಎಂ. ಯಾಕೊಳ್ಳಿ, ೩. ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಹಾಗೂ ಹಿರಿಯ ಉಪಾಧ್ಯಕ್ಷರಾದ ಪಾಂಡುರಂಗ ಸ್ವಾಮಿ ಅವರನ್ನೊಳಗೊಂಡ ಆಯ್ಕೆ ಸಮಿತಿ ಒಂದು ವಾರದ ಹಿಂದೆ ರಚಿಸಲಾಗಿತ್ತು. ಆ ನಾಲ್ವರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಲಿಖಿತವಾಗಿ ಕಳಿಸಿದ್ದು ಒಂದೇ ಹೆಸರನ್ನು ಸೂಚಿಸಿದ್ದಾರೆ.
ನಿಯೋಜಿತ ಅಧ್ಯಕ್ಷರ ಕಿರುಪರಿಚಯ:
63 ವರ್ಷ ವಯಸ್ಸಿನ ಅಪ್ಪಾಸಾಹೇಬ ಅಲಿಬಾದಿಯವರು ಕಳೆದ ನಾಲ್ಕು ದಶಕಗಳಿಂದ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿದ್ದು ಈವರೆಗೆ ಸುಮಾರು ೪೨ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ೧೫ ಹನಿಗವನ/ ಚುಟುಕು ಸಂಕಲನಗಳು ಮತ್ತು ೬ ವಚನ ಸಂಕಲನಗಳಿವೆ. (ಇನ್ನೂ ಮೂರು ಕೃತಿಗಳು ಬರಲಿವೆ). ಅವರ ಬದುಕು ಬರೆಹ ಸಾಧನೆ ಕುರಿತು ನಾಲ್ಕು ಗ್ರಂಥಗಳು ಹೊರಬಂದಿವೆ. ( ಸುವರ್ಣ ಮಿಂಚು ಅಭಿನಂದನ ಸಂಪುಟ)
ಶ್ರೀಯುತರಿಗೆ ತ್ಯಾಗವೀರ ಶಿರಸಂಗಿ ಲಿಂಗರಾಜ ಪ್ರಶಸ್ತಿ, ಮಿರ್ಜಿ ಅಣ್ಣಾರಾಯ ಪ್ರಶಸ್ತಿ, ಮರುಳಶಂಕರ ಸಾಹಿತ್ಯ ಪ್ರಶಸ್ತಿ, ಪ್ರಶಸ್ತಿ, ಸಾಹಿತ್ಯಭೂಷಣ ಪ್ರಶಸ್ತಿ, ಸಾಹಿತ್ಯರತ್ನ ಪ್ರಶಸ್ತಿ ಬಸವ ಶಿರೋಮಣಿ ಪ್ರಶಸ್ತಿ , ಸಿರಿಗನ್ನಡ ವರ್ಷದ ವ್ಯಕ್ತಿ ಪ್ರಶಸ್ತಿ, ಸಹಿತ ನಾಲ್ವತ್ತಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ದೊರಕಿವೆ.
ಅಲಿಬಾದಿಯವರು ಚುಟುಕು ಸಾಹಿತ್ಯ ಕ್ಷೇತ್ರದಲ್ಲೂ ಎರಡು ದಶಕಗಳಿಂದ ಸಕ್ರಿಯರಾಗಿದ್ದು, ೨೦೦೫ ರಲ್ಲಿ ಚುಸಾಪ ಅಥಣಿ ತಾಲೂಕಾ ಘಟಕದ ಗೌರವಾಧ್ಯಕ್ಷರಾಗಿ, ೨೦೦೪-೫ ರಲ್ಲಿ ಜಿಲ್ಲಾ ಚುಸಾಪ ಸಮಿತಿ ಉಪಾಧ್ಯಕ್ಷರಾಗಿ, ೨೦೨೪ ರಿಂದ ಮತ್ತೆ ತಾಲೂಕಾ ಘಟಕದ ಗೌರವಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತ ಬಂದಿದ್ದಾರೆ. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಅಲಿಬಾದಿ ಎಜ್ಯುಕೇಶನಲ್ & ಸೋಸಿಯಲ್ ವೆಲ್ ಫೇರ್ ಫೌಂಡೇಶನ್ ಹಾಗೂ ಅಲಿಬಾದಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿಗಳಾಗಿ, ಗಡಿನಾಡ ಕನ್ನಡಿಗರ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷರಾಗಿ, ಶರಣ ಸಂಸ್ಕೃತಿ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾಗಿ, ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ತಾಲೂಕಾ ಅಧ್ಯಕ್ಷರಾಗಿ , ಸಂಗಡ ಐವತ್ತಕ್ಕೂ ಹೆಚ್ಚು ವಿವಿಧ ಸಂಘಸಂಸ್ಥೆಗಳಲ್ಲಿ ವಿವಿದ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಭಾರತೀಯ ಜೀವವಿಮಾ ನಿಗಮದ ಯಶಸ್ವಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅವರು ಉತ್ತಮ ಕೃಷಿಕರೂ ಆಗಿದ್ದಾರೆ. ತಮ್ಮ ಶಾಂತಿನಿಕೇತನ ಮಹಾಮನೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಗ್ರಂಥಗಳ ಬೃಹತ್ ಭಾಂಡಾರವನ್ನು ಸ್ಥಾಪಿಸಿರುವ ಅವರು, ಬಾನುಲಿ ದೂರದರ್ಶನಗಳಲ್ಲಿ, ಸಾರ್ವಜನಿಕವಾಗಿ ಸಾವಿರಾರು ಕಾರ್ಯಕ್ರಮ ನೀಡಿದ್ದಾರೆ. 2017 ರಲ್ಲಿ ಬೆಂಗಳೂರಿನಲ್ಲಿ ಜರುಗಿದ ಅಖಂಡ ಕರ್ನಾಟಕ ದ್ವಿತೀಯ ಚುಟುಕು ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರಾಗುವ ಗೌರವ ,
ಲಕ್ಷದ್ವೀಪದಲ್ಲಿ ಜರುಗಿದ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ಅಧ್ಯಕ್ಷರಾಗುವ ಗೌರವವನ್ನೂ ಪಡೆದಿದ್ದಾರೆ.
ಹೀಗೆ ಸಾಹಿತ್ಯ, ಕೃಷಿ, ಧಾರ್ಮಿಕ , ಸಾಮಾಜಿಕ, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರಗಳಲ್ಲೆಲ್ಲ ನಿರಂತರ ತಮ್ಮನ್ನು ತೊಡಗಿಸಿಕೊಂಡು ವಿಶಿಷ್ಟ ಸೇವೆ ಸಲ್ಲಿಸಿರುವ ಅಪ್ಪಾಸಾಹೇಬ ಅಲಿಬಾದಿಯವರಂತಹ ಬಹುಮುಖ ಸಾಮರ್ಥ್ಯದ ವ್ಯಕ್ತಿ ನಾಲ್ಕನೆಯ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಲಿರುವುದು ಅಭಿಮಾನದ ಸಂಗತಿಯಾಗಿದೆ. ಅವರಿಗೆ ಚುಟುಕು ಸಾಹಿತ್ಯ ಪರಿಷತ್ತು, ಎಲ್ಲ ತಾಲೂಕಾ ಘಟಕಗಳು ಮತ್ತು ಬೆಳ್ಳಿಹಬ್ಬ/ ಸಮ್ಮೇಳನದ ಸ್ವಾಗತ ಸಮಿತಿಗಳ ವತಿಯಿಂದ ಅಭಿನಂದನೆ ಸಲ್ಲಿಸುವುದಾಗಿ
ಎಲ್. ಎಸ್. ಶಾಸ್ತ್ರಿ ,ಜಿಲ್ಲಾಧ್ಯಕ್ಷರು,
ಡಾ. ಸಿ. ಕೆ. ಜೋರಾಪುರ, ಕಾರ್ಯಾಧ್ಯಕ್ಷರು
ಬಸವರಾಜ ಗಾರ್ಗಿ
ಪ್ರ. ಕಾರ್ಯದರ್ಶಿ, ಜಿಲ್ಲಾ ಚುಸಾಪ ಬೆಳಗಾವಿ ತಿಳಿಸಿದ್ದಾರೆ.