ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಅಂಗನವಾಡಿ ಮಕ್ಕಳಿಗೂ ಅಪಾರ್ ಐಡಿ(ಆಟೋಮೆಟೆಡ್ ಪರ್ಮನೆಂಟ್ ಅಕಾಡೆಮಿಕ್ ಅಕೌಂಟ್ ರಿಜಿಸ್ಟ್ರಿ) ಜಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂದಾಗಿದೆ.
ಅಂಗನವಾಡಿ ನಂತರ ಶಾಲೆಗೆ ಸೇರುವ ಮಕ್ಕಳ ಅನುಕೂಲಕ್ಕಾಗಿ 12 ಸಂಖ್ಯೆಯ ಅಪಾರ್ ಐಡಿಯನ್ನು ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ತರಲಾಗುತ್ತಿದೆ.
ಈ ಐಡಿಯಿಂದಾಗಿ ಅಂಗನವಾಡಿಗೆ ಸೇರುವ ಮಗು ಮುಂದಿನ ಶಿಕ್ಷಣಕ್ಕೆ ದೇಶದ ಯಾವುದೇ ಭಾಗದಲ್ಲಿ ಶಿಕ್ಷಣ ಸಂಸ್ಥೆಗೆ ಪ್ರವೇಶ ಪಡೆದುಕೊಳ್ಳಲು ಸಹಾಯಕವಾಗಲಿದೆ. ಮಕ್ಕಳ ಶಾಲಾ ವರ್ಗಾವಣೆ ಪತ್ರ ಪ್ರಕ್ರಿಯೆಯನ್ನು ಇದು ಸರಳಗೊಳಿಸುತ್ತದೆ. ಶೈಕ್ಷಣಿಕ ಪ್ರಗತಿ, ಹಿಂದಿನ ಕಲಿಕೆಯನ್ನು ಗುರುತಿಸಬಹುದಾಗಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಒನ್ ನೇಷನ್ ಒನ್ ಸ್ಪೂಡೆಂಟ್ ಐಡಿ ಯೋಜನೆಯಡಿ ಅಪಾರ್ ಐಡಿಯನ್ನು ಕರ್ನಾಟಕದ ಅಂಗನವಾಡಿ ಕೇಂದ್ರಗಳಲ್ಲಿ ಜಾರಿಗೆ ತರಲಾಗುತ್ತಿದೆ. ಅಂಗನವಾಡಿಗೆ ಮಕ್ಕಳು ದಾಖಲಾಗುವ ವೇಳೆ ಪೋಷಕರ ವಿವರ, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ಜನನ ಪ್ರಮಾಣ ಪತ್ರವನ್ನು ಪೋಷಣ್ ಟ್ರ್ಯಾಕರ್ ನಲ್ಲಿ ಭರ್ತಿ ಮಾಡಿದರೆ ಅಪಾರ್ ಐಡಿ ಸಿಗಲಿದೆ. ಪ್ರತಿ ಮಗುವಿಗೂ ಕಾರ್ಡ್ ನೀಡಲಿದ್ದು, ಇದರಲ್ಲಿ ಮಗುವಿನ ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿಗಳು ಇರುತ್ತವೆ. ಮಕ್ಕಳ ಶೈಕ್ಷಣಿಕ ದಾಖಲಾತಿ ಸಂಗ್ರಹಿಸಲು ಅಪಾರ್ ಐಡಿಯಿಂದ ಅನುಕೂಲವಾಗಲಿದೆ.