ಮಾಗಡಿ : ಮಾಗಡಿ ತಿಪ್ಪಸಂದ್ರ ಹೋಬಳಿ ಮರಡಿಗುಡ್ಡೆಯ 100 ಎಕರೆ ಹಚ್ಚ ಹಸಿರಿನ ಪರಿಸರದ 50 ಸಾವಿರ ಚದರಡಿ ಪ್ರದೇಶದಲ್ಲಿ ನಿರ್ಮಾಣವಾಗಿರುವ ಸಂಸ್ಕೃತ ವಿಶ್ವವಿದ್ಯಾಲ ಯದ ಕಟ್ಟಡ ಲೋಕಾರ್ಪಣೆಗೆ ಸಜ್ಜಾಗಿದೆ.
2011ರಲ್ಲಿ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ 100 ಎಕರೆ ಜಾಗವನ್ನು ಮಂಜೂರು ಮಾಡಿದ್ದರು. 2022ರಲ್ಲಿ ₹25 ಕೋಟಿ ವೆಚ್ಚದಲ್ಲಿ ಆರಂಭವಾದ ಕಾಮಗಾರಿ ಪೂರ್ಣಗೊಂಡಿದ್ದು, ಬಿಸ್ಕೂರು, ತಿಪ್ಪಸಂದ್ರ, ನಾರಸಂದ್ರ ಗ್ರಾಪಂ ವ್ಯಾಪ್ತಿಯಲ್ಲಿ ವಿಸ್ತರಿಸಿಕೊಂಡಿದೆ. ಔಷಧೀಯ ಗಿಡಗಳು, ಪಕ್ಷಿಗಳು ಗೂಡುಕಟ್ಟಲು ಅನುಕೂಲವಾಗಲೆಂದು ಬಿದಿರುಗಳನ್ನು ಬೆಳೆಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ,ಹಿಂಭಾಗ ರೈಲ್ವೆ ನಿಲ್ದಾಣವಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ರಾಜ್ಯ ಸಂಸ್ಕೃತ ಪಾಠಶಾಲೆಗಳ ಉಪಾಧ್ಯಕ್ಷ ಕಣನೂರು ರಾಜಣ್ಣ ಅಭಿಪ್ರಾಯ ಪಟ್ಟಿದ್ದಾರೆ.
ವಿದ್ಯಾರ್ಥಿನಿಲಯ, ವಿವಿಧ ಕೋರ್ಸ್: 15 ತರಗತಿ ಕೊಠಡಿಗಳಿದ್ದು, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ಗೃಹಗಳಿವೆ. 29 ಪದವಿ ಕಾಲೇಜುಗಳು ಈ ವ್ಯಾಪ್ತಿಗೆ ಬರಲಿದ್ದು, 400 ಕ್ಕೂ ಹೆಚ್ಚು ಶಾಲೆಗಳು ನಿರ್ದೇಶಕರ ವ್ಯಾಪ್ತಿಗೆ ಒಳಪಡುತ್ತವೆ. ಸಂಸ್ಕೃತದ ಜತೆಗೆ ಪ್ರಾದೇಶಿಕ ಭಾಷೆ, ಸಂಖ್ಯಾಶಾಸ್ತ್ರ, ಯೋಗ, ಯೋಗ, ಭವಿಷ್ಯ, ತರ್ಕ, ಜ್ಯೋತಿಷ್ಯ, ಅಲಂಕಾರ, ವ್ಯಾಕರಣ, ಅದೈತ, ವಿಶಿಷ್ಟಾದೈತ, ಶಕ್ತಿ ವಿಶಿಷ್ಟಾದೈತ, ವೇದಶಾಸ್ತ್ರ ಹೀಗೆ 50ಕ್ಕೂ ಅಧಿಕ ವಿಭಾಗಗಳಲ್ಲಿ ಶಿಕ್ಷಣ ನೀಡಲಾಗುತ್ತದೆ.