ಬೆಳಗಾವಿ :
ತಮಿಳುನಾಡು ಮೂಲದ ಬೆಳಗಾವಿ ದಂಡು ಮಂಡಳಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ. ಆನಂದ್ (40 ವರ್ಷ) ಅವರು ನಿಗೂಢವಾಗಿ ಮೃತಪಟ್ಟಿದ್ದು ಅವರ ಶವದ ಬಳಿ ವಿಷದ ಬಾಟಲಿ ಮತ್ತು ಡೆತ್ ನೋಟ್ ಪತ್ತೆಯಾಗಿದೆ.
ಅವರು ಅವಿವಾಹಿತರಾಗಿದ್ದು, ಕ್ಯಾಂಪ್ ಪ್ರದೇಶದ ಸರ್ಕಾರಿ ಬಂಗಲೆಯಲ್ಲಿ ಒಂದೂವರೆ ವರ್ಷದಿಂದ ವಾಸವಾಗಿದ್ದರು. ಗುರುವಾರ ರಾತ್ರಿ ಮಲಗುವ ಕೋಣೆಗೆ ತೆರಳಿದವರು ಮತ್ತೆ ವಾಪಸ್ ಬಂದಿಲ್ಲ ಎಂಬ ಮಾಹಿತಿ ಗೊತ್ತಾಗಿದೆ. ಕೆಲಸದವರಿಗೂ ಯಾವುದೇ ಸೂಚನೆ ನೀಡಿರಲಿಲ್ಲ. ಕೆಲವರು ಸಾಕಷ್ಟು ಮೊಬೈಲ್ ಕರೆ ಮಾಡಿದರೂ ಸ್ಪಂದಿಸಲಿಲ್ಲ. ಶನಿವಾರ ಬೆಳಗ್ಗೆ ಮನೆ ಕೆಲಸದವರು ದಂಡು ಮಂಡಳಿ ಮಾಜಿ ಉಪಾಧ್ಯಕ್ಷ ಸಾಜಿದ್ ಶೇಖ್ ಅವರಿಗೆ ಮಾಹಿತಿ ನೀಡಿದರು. ಅವರು ಪೊಲೀಸರನ್ನು ಕರೆಸಿ , ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಆನಂದ್ ಅವರ ಶವ ಪತ್ತೆಯಾಗಿದೆ.
ಆನಂದ್ ಅವರ ಕೊಠಡಿ ತಪಾಸಣೆ ವೇಳೆ ಡೆತ್ ನೋಟ್ ಮತ್ತು ವಿಷದ ಬಾಟಲಿ ಪತ್ತೆಯಾಗಿದೆ. ಅದರಲ್ಲಿ ಯಾವೆಲ್ಲಾ ಅಂಶ ಇದೆ ಎಂಬ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ತಿಳಿಸಿದ್ದಾರೆ.
ಕ್ಯಾಂಪ್ ನಲ್ಲಿರುವ ಸಿಇಒ ಕೆ.ಆನಂದ್ ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಆನಂದ್ 2021ರಿಂದ ಬೆಳಗಾವಿ ದಂಡು ಮಂಡಳಿ ಸಿಇಒ ಆಗಿ ಕೆಲಸ ಮಾಡುತ್ತಿದ್ದರು. ಕಳೆದ 2 ದಿನಗಳಿಂದ ಅವರ ಮನೆ ಬಾಗಿಲು ತೆರೆದಿರಲಿಲ್ಲ. ಆನಂದ್ ಅವರ ತಂದೆಯನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಶನಿವಾರ ಬಾಗಿಲು ತೆರೆದು ನೋಡಿದಾಗ ಆನಂದ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಮೂಗಿನಿಂದ ರಕ್ತ ಸೋರಿ ಕೆಳಗೆ ಬಿದ್ದಿದ್ದಾರೆ, ಹಾಸಿಗೆ ಪಕ್ಕದಲ್ಲಿ ಒಂದು ವಿಷಯ ಬಾಟಲು ಸಿಕ್ಕಿದೆ. ಯಾವುದೋ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ತಿಳಿಸಿದರು.
ಬೆರಳಚ್ಚು ತಜ್ಞರು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಎಲ್ಲಾ ಪರೀಕ್ಷೆ ಮಾಡಿದ್ದಾರೆ. 174 ವಿಧಿಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದು, ಎಫ್ಎಸ್ಎಲ್ ವರದಿ ಬಂದ ಬಳಿಕ ನಿಖರ ಮಾಹಿತಿ ತಿಳಿಯಲಿದೆ. ಡೆತ್ ನೋಟ್ ನಲ್ಲಿ ಏನು ಬರೆದಿದ್ದಾರೆ ಎನ್ನುವುದು ತನಿಖೆ ನಂತರ ಗೊತ್ತಾಗಲಿದೆ ಎಂದು ಅವರು ತಿಳಿಸಿದರು.
ಡೆತ್ ನೋಟ್ ನಲ್ಲಿ ಸಿಬಿಐ ದಾಳಿಯ ಪ್ರಸ್ತಾಪ ಇಲ್ಲ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ಡಿಸಿಪಿ ರೋಹನ್ ಜಗದೀಶ್ ಅವರು ಕ್ವಾರ್ಟರ್ಸ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನಂದ್ ಅವರ ಮುಖದ ಮೇಲೆ ಅಲ್ಪ ಪ್ರಮಾಣದ ರಕ್ತಸ್ರಾವ ಕಂಡು ಬಂದಿದೆ. ಬೆಡ್ ಮೇಲಿನಿಂದ ಅವರು ಅವರು ಕೆಳಗೆ ಬಿದ್ದಿರಬಹುದು. ರೂಮಿನ ಒಳಗೆ ಬೇರೆ ಯಾರು ಒತ್ತಾಯದಿಂದ ಪ್ರವೇಶ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿಲ್ಲ ಎಂದು ಅವರು ತಿಳಿಸಿದರು.
ಆನಂದ್ ಅವರ ತಂದೆ ಚೆನ್ನೈನಲ್ಲಿ ವಾಸವಾಗಿದ್ದಾರೆ. ಅವರಿಗೆ ಸುದ್ದಿ ಮುಟ್ಟಿಸಲಾಗಿದೆ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವವನ್ನು ಚೆನ್ನೈಗೆ ಕಳಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಡು ಮಂಡಳಿಯಲ್ಲಿ ಎರಡು ವರ್ಷಗಳ ಹಿಂದೆ 17 ಸಿಬ್ಬಂದಿಗಳ ನೇಮಕಾತಿ ನಡೆದಿದ್ದು ಇದು ಅಕ್ರಮವಾಗಿ ನಡೆದಿದೆ ಎಂಬ ಬಗ್ಗೆ ಖಚಿತ ದೂರಿನ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳ ತಂಡ ವಾರದ ಹಿಂದೆ ಈ ದಾಳಿ ನಡೆಸಿತ್ತು.