ದೆಹಲಿ: ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾದ ನಡುವೆಯೇ ಭಾರತವು ಪಾಕಿಸ್ತಾನಕ್ಕೆ ಮತ್ತೊಂದು ಆಘಾತ ನೀಡಿದೆ.
ಈಗಾಗಲೇ ಸಿಂಧೂ ನದಿಯ ನೀರು ಸ್ಥಗಿತ ಮಾಡಿರುವ ಭಾರತ ಈಗ ಮಹತ್ವದ ಮತ್ತೊಂದು ಕ್ರಮವೊಂದರಲ್ಲಿ, ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಎರಡು ಅಣೆಕಟ್ಟುಗಳ ನೀರನ್ನು ಸ್ಥಗಿತಗೊಳಿಸಿದೆ. ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಚೆನಾಬ್ ನದಿಯ ಬಾಗ್ಲಿಹಾರ್ ಅಣೆಕಟ್ಟಿನ ನೀರಿನ್ನು ನಿಲ್ಲಿಸಿದೆ ಮತ್ತು ಝೀಲಂ ನದಿಯ ಕಿಶನ್ಗಂಗಾ ಅಣೆಕಟ್ಟಿನಲ್ಲೂ ಇದೇ ರೀತಿಯ ಕ್ರಮಗಳನ್ನು ಯೋಜಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಬರ್ಬರ ಭಯೋತ್ಪಾದಕ ದಾಳಿಯಲ್ಲಿ ಬೈಸರನ್ ಹುಲ್ಲುಗಾವಲುಗಳಲ್ಲಿ 26 ಪ್ರವಾಸಿಗರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದ ನಂತರ, ಪಾಕಿಸ್ತಾನದೊಂದಿಗಿನ ದಶಕಗಳಷ್ಟು ಹಳೆಯದಾದ ಸಿಂಧೂ ಜಲ ಒಪ್ಪಂದವನ್ನು ಭಾರತ ಸ್ಥಗಿತಗೊಳಿಸಿತ್ತು. ಈಗ ಈ ಕ್ರಮ ಕೈಗೊಳ್ಳಲಾಗಿದೆ.
ಈ ಎರಡೂ ಅಣೆಕಟ್ಟುಗಳು ಜಲವಿದ್ಯುತ್ ಕೇಂದ್ರಗಳಾಗಿದ್ದು, ಜಮ್ಮುವಿನ ರಾಂಬನ್ನಲ್ಲಿರುವ ಬಾಗ್ಲಿಹಾರ್ ಮತ್ತು ಉತ್ತರ ಕಾಶ್ಮೀರದ ಕಿಶನ್ಗಂಗಾ – ಭಾರತಕ್ಕೆ ನೀರು ಬಿಡುಗಡೆಯ ಸಮಯವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ನೀಡುತ್ತವೆ ಎಂದು ಹೇಳಲಾಗಿದೆ.
1960 ರಿಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಿಂಧೂ ನದಿ ಮತ್ತು ಅದರ ಉಪನದಿಗಳ ಬಳಕೆಯನ್ನು ಸಿಂಧೂ ಜಲ ಒಪ್ಪಂದವು ನಿಯಂತ್ರಿಸುತ್ತಿದೆ. ಒಪ್ಪಂದದ ಅಮಾನತಿಗೆ ಪಾಕಿಸ್ತಾನವು ಆಕ್ರೋಶ ವ್ಯಕ್ತಪಡಿಸಿದ್ದು, ಇದು ಈ ಕ್ರಮವನ್ನು “ಯುದ್ಧದ ಕ್ರಿಯೆ” ಎಂದು ಹೇಳಿದೆ.
ರಾಂಬನ್ನಲ್ಲಿರುವ ಬಾಗ್ಲಿಹಾರ್ ಮತ್ತು ಉತ್ತರ ಕಾಶ್ಮೀರದ ಕಿಶನ್ಗಂಗಾ ಎರಡೂ ಜಲವಿದ್ಯುತ್ ಅಣೆಕಟ್ಟುಗಳಿಂದ ಹೊರಹೋಗುವ ನೀರಿನ ಹರಿವಿನ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ ಎಂದು ಹೇಳಲಾಗಿದೆ. ಬಾಗ್ಲಿಹಾರ್ ಅಣೆಕಟ್ಟು ಎರಡು ದೇಶಗಳ ನಡುವಿನ ದೀರ್ಘಕಾಲದ ವಿವಾದದ ವಿಷಯವಾಗಿದೆ, ಈ ವಿಚಾರದಲ್ಲಿ ಪಾಕಿಸ್ತಾನವು ಹಿಂದೆ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯನ್ನು ಕೋರಿತ್ತು.
ಪಾಕಿಸ್ತಾನದ ವಿರುದ್ಧದ ಮತ್ತೊಂದು ದಂಡನಾತ್ಮಕ ಕ್ರಮದಲ್ಲಿ, ಭಾರತವು ಪಾಕಿಸ್ತಾನದಿಂದ ಬರುವ ಎಲ್ಲಾ ಆಮದುಗಳನ್ನು ನಿಷೇಧಿಸಿತು, ಪಾಕಿಸ್ತಾನ ಧ್ವಜ ಹೊಂದಿರುವ ಎಲ್ಲಾ ಹಡಗುಗಳು ಭಾರತೀಯ ಬಂದರುಗಳಲ್ಲಿ ನಿಲ್ಲುವುದನ್ನು ನಿಷೇಧಿಸಿತು ಮತ್ತು ಎಲ್ಲಾ ಅಂಚೆ ಸೇವೆಗಳನ್ನು ಮುಚ್ಚಿತು. ಪಾಕಿಸ್ತಾನದ ಆರ್ಥಿಕತೆಗೆ ಹಾನಿ ಮಾಡುವ ಪ್ರತಿಯಾಗಿ ಭಾರತವು ಪಾಕಿಸ್ತಾನಿ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ಸಹ ಮುಚ್ಚಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಪ್ರತಿಕ್ರಿಯೆಯ ವಿಧಾನ, ಗುರಿಗಳು ಮತ್ತು ಸಮಯವನ್ನು ನಿರ್ಧರಿಸಲು ಸಶಸ್ತ್ರ ಪಡೆಗಳಿಗೆ “ಸಂಪೂರ್ಣ ಕಾರ್ಯಾಚರಣೆಯ ಸ್ವಾತಂತ್ರ್ಯ”ವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಪ್ರತಿಪಾದಿಸಿದ್ದರು.