ಹುಬ್ಬಳ್ಳಿ: ಈ ವರ್ಷ ಒಟ್ಟು ಮೂರು ಗಣ್ಯರ ಸಾವು ಉಂಟಾಗಲಿದೆ. ಇಬ್ಬರು ರಾಷ್ಟ್ರಮಟ್ಟದ ನಾಯಕರು ಹಾಗೂ ಧಾರ್ಮಿಕರೊಬ್ಬರು ಮೃತಪಡುತ್ತಾರೆ ಎಂದು ಕೋಡಿಮಠದ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಕೋಡಿಮಠ ಸ್ವಾಮೀಜಿ, ರಾಷ್ಟ್ರ ಮಟ್ಟದ ಇಬ್ಬರು ನಾಯಕರಿಗೆ ಸಾವಿನ ಕಂಟಕ ಇದೆ. ಸನ್ಯಾಸಿಯೊಬ್ಬರ ಜೀವಕ್ಕೂ ಆಪತ್ತು ಎದುರಾಗಲಿದೆ. ವಿದೇಶಗಳಲ್ಲಿ ಆಗುವ ಕೆಲ ಬೆಳವಣಿಗೆಗಳಿಂದ ಭಾರತಕ್ಕೂ ಯುದ್ಧ ಭೀತಿ ಎದುರಾಗಲಿದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಅಕಾಲಿಕ ಮಳೆ ಭಾರಿ ಪ್ರಮಾಣದಲ್ಲಿ ಆಗಲಿದೆ. ಇದರಿಂದ ಬೆಳೆ ಹಾನಿ ಆಗುವುದರ ಜತೆಗೆ ಜನರ ಜೀವಕ್ಕೂ ಆಪತ್ತು ಎದುರಾಗಲಿದೆ. ಬರಗಾಲದಿಂದ ಕಂಗೆಟ್ಟಿದ್ದ ರೈತರು, ನಾಗರಿಕರು ಮುಂದೆ ಪ್ರವಾಹಕ್ಕೆ ತುತ್ತಾಗುವ ಎಚ್ಚರಿಕೆ ನೀಡಿದ್ದಾರೆ.
ಅಣುಬಾಂಬ್ ಬೀಳಲಿದೆ. ವಿಶ್ವದಲ್ಲಿ ಯುದ್ಧ ಭೀತಿ ಎದುರಾಗಲಿದೆ. ಅಲ್ಲಿ ಅಣುಬಾಂಬ್ ಸ್ಫೋಟಕ್ಕೂ ಸಂಚು ಮಾಡಲಾಗುತ್ತದೆ. ಈ ವರ್ಷ ಜಾಗತಿಕವಾಗಿ ತುಂಬಾ ಅಪಾಯಕಾರಿಯಾಗಿದೆ. ಗೌರಿ ಶಂಕರ ಶಿವಾ.. ಶಿವಾ.. ಎನ್ನುವ ರೀತಿ ಆಗಲಿದ್ದು, ಮನುಕುಲ ಸಂಕಷ್ಟಕ್ಕೆ ಸಿಲುಕಲಿದೆ. ಮುಂಬರಲಿರುವ ದಿನಗಳು ಕಷ್ಟಕರವಾಗಿವೆ ಎಂದು ಹೇಳಿದ್ದಾರೆ.
ಈ ವರ್ಷ ಸಾಕಷ್ಟು ತೊಂದರೆ
2024 ರ ವರ್ಷ ಬಹಳ ತೊಂದರೆಯಿಂದ ಕೂಡಿರಲಿದೆ. ಕಾಲಕ್ಕೆ ಮಳೆ ಬೆಳೆ ಬರಲ್ಲ. ಅಕಾಲಿಕ ಮಳೆ ಬೆಳೆ ಬರುತ್ತದೆ. ಇದರಿಂದ ಜನರಿಗೆ ತೊಂದರೆ ಆಗಲಿದೆ. ಇದರ ಜತೆಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಮಾಣದ ಅನಾಹುತ ಆಗುತ್ತವೆ. ವಿದೇಶದಲ್ಲಿ ಆಗುವ ಅನಾಹುತ ನಮ್ಮ ದೇಶದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.
ಯುಗಾದಿ ಬಳಿಕ ರಾಜ್ಯ ರಾಜಕೀಯದಲ್ಲಿ ಹಲವು ಏರುಪೇರಾಗಲಿದೆ. ಆ ಬಗ್ಗೆ ಮಾತನಾಡಲು ಆಗಲ್ಲ. ಯುಗಾದಿ ಬಳಿಕ ನಾನು ಅಧ್ಯಯನ ಮಾಡಿ ತಿಳಿಸಬಹುದು. ಆಂತರಿಕ ಮಾಲಿನ್ಯ ಹೆಚ್ಚಾಗಲಿದೆ
ನಾಡಿನಲ್ಲಿ ಒಳ್ಳೆಯ ಆಹಾರ ಗಾಳಿ, ವಾತಾವರಣ ಇಲ್ಲದಾಗಿದೆ. ಮನುಷ್ಯನ ಆರೋಗ್ಯ, ಆಯುಷ್ಯ ಕಡಿಮೆ ಆಗುತ್ತಿದೆ. ಇತ್ತ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಇನ್ನು ಮನುಷ್ಯನಲ್ಲಿ ಆಂತರಿಕ ನೆಮ್ಮದಿ ಇಲ್ಲದಂತಾಗಿದೆ. ಹಲವು ದುಶ್ಚಟಕ್ಕೆ ಬಲಿಯಾಗುತ್ತಿದ್ದಾನೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.