ಇದೊಂದು ತ್ರಿಕೋನ ಚಲನಚಿತ್ರ ಕಥೆಯಂತಿದೆ. ದೂರು ತೆಗೆದುಕೊಂಡು ಹೋದವಳ ಪತಿಯ ಜೊತೆ ರಾಜಿ ಸಂಧಾನ ಮಾಡುವವಳ ಪ್ರೇಮ ಕುದುರಿದ ಪ್ರಕರಣವಿದು ! ಈ ನಿಟ್ಟಿನಲ್ಲಿ ತಬಸ್ಸುಮಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ಕೆಪಿಸಿಸಿ ಸದಸ್ಯೆ ಆಯೇಷಾ ಸನದಿ ನೇತೃತ್ವದಲ್ಲಿ ಮಹಿಳಾ ಪೊಲೀಸ್ ಠಾಣೆ ಬಳಿ ಪ್ರತಿಭಟಿಸಲಾಗಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಆಯೇಷಾ ಸನದಿ ಅವರು ತಬಸ್ಸುಮ್ ಹಾಗೂ ಮುಹಮ್ಮದ್ ಆಸೀಫ್ ದಂಪತಿಯ ಕಲಹ ದೂರ ಮಾಡುವಂತೆ ಸೀಮಾ ಇನಾಂದಾರ್ ಬಳಿ ಹೋದ ತಬಸ್ಸುಮ್ಗೆ ಅನ್ಯಾಯವಾಗಿದೆ. ಸಾಮಾಜಿಕ ಹೋರಾಟಗಾರ್ತಿ ಎಂದು ಹೇಳಿಕೊಳ್ಳಲು ಸೀಮಾ ನಾಲಾಯಕ್. ಎರಡನೇ ಮದುವೆಯಾಗಬೇಕಂದರೆ ವಿಚ್ಛೇದನ ಆಗಿರಬೇಕು. ಮೊದಲ ಪತ್ನಿಯ ಒಪ್ಪಿಗೆ ಇರಬೇಕು. ಗಂಡ-ಹೆಂಡಿರ ಜಗಳ ಬಗೆಹರಿಸುತ್ತೇನೆ ಎಂದು ಬಂದು ಈಗ ತಾನೇ ವಿವಾಹವಾದ ಸೀಮಾ ಇನಾಂದಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಬ್ಬರಿಗೂ ವಿವಾಹ ಮಾಡಿಸಿದ ಮೌಲ್ವಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಸೀಮಾ ಇನಾಂದಾರ್ ಪರ ಪೊಲೀಸರು ನಿಂತಿದ್ದು ತಬಸ್ಸುಮ್ಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಬೆಳಗಾವಿ : ಆಕೆ ಎರಡು ದಶಕಗಳಿಂದ ಬೆಳಗಾವಿಯಲ್ಲಿ ಕೆಲ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಳು. ತಾನು ಸಮಾಜ ಸೇವಕಿ ಎಂದು ಗುರುತಿಸಿಕೊಂಡಿದ್ದಳು. ಬೆಳಗಾವಿಯಲ್ಲಿ ಚಿರಪರಿಚಿತಳಾಗಿದ್ದ ಈಕೆ ಹಲವು ಜನಪರ ಹೋರಾಟ ಹಾಗೂ ರಾಜಿ ಸಂಧಾನದಲ್ಲಿ ಭಾಗಿಯಾಗಿದ್ದಳು. ಆದರೆ, ಇದೀಗ ರಾಜಿ ಸಂಧಾನಕ್ಕೆಂದು ಬಂದವನ ಜೊತೆ ಈಕೆಯ ವಿವಾಹ ನಡೆದಿದೆ. ಇದು ಅವನ ಮೊದಲ ಪತ್ನಿಯ ಆಕ್ರೋಶಕ್ಕೆ ಕಾರಣವಾಗಿದೆ. ತನಗೆ ಅನ್ಯಾಯವಾಗಿದ್ದು ಹಾಗೂ ರಾಜಿ ಸಂಧಾನಗಾರ್ತಿಯಾಗಿರುವ ಎರಡನೇ ಪತ್ನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆಯ ಕಟ್ಟೆ ಏರಿದ್ದಾರೆ.
ಘಟನೆ ವಿವರ : ಬೆಳಗಾವಿಯ ಕೇಂದ್ರ ಜಿಎಸ್ಟಿ ಕಚೇರಿಯಲ್ಲಿ ಸುಪರಿಟೆಂಡೆಂಟ್ ಆಗಿರುವ ಮುಹಮ್ಮದ್ ಆಸೀಫ್ ಎಂ. ಇನಾಂದಾರ್ ವಿರುದ್ಧ ಪತ್ನಿ ತಬಸ್ಸುಮ್ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
23 ವರ್ಷದ ಹಿಂದೆ ವಿವಾಹವಾಗಿದ್ದ ಮುಹಮ್ಮದ್ ಆಸೀಫ್ ಇನಾಂದಾರ್ ಮತ್ತು ತಬಸ್ಸುಮ್ ದಂಪತಿಗೆ 21 ವರ್ಷ ,16 ವರ್ಷದ ಇಬ್ಬರು ಪುತ್ರರಿದ್ದಾರೆ. 12 ವರ್ಷಗಳಿಂದ ತಬಸ್ಸುಮ್ಗೆ ಪತಿ ಮುಹಮ್ಮದ್ ಆಸೀಫ್ ಇನಾಂದಾರ್ ಕಿರುಕುಳ ನೀಡುತ್ತಿದ್ದನಂತೆ. ಆಗ ಬೆಳಗಾವಿಯಲ್ಲಿ ಎನ್ಜಿಒ ಮೂಲಕ ಜನರ ಸಮಸ್ಯೆ ಬಗೆಹರಿಸುತ್ತಿರುವ ಸೀಮಾ ಇನಾಂದಾರ್ಗೆ ತಬಸ್ಸುಮ್ ತಮ್ಮ ಸಂಸಾರ ಸರಿಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಮುಹಮ್ಮದ್ ಆಸೀಫ್ ಇನಾಂದಾರ್ – ತಬಸ್ಸುಮ್ ದಂಪತಿ ನಡುವಿನ ಕಲಹ ದೂರ ಮಾಡುವುದಾಗಿ ಹೇಳಿದ್ದ ಸೀಮಾ ಇನಾಂದಾರ್ ಮುಹಮ್ಮದ್ ಆಸೀಫ್ನ ಜೊತೆ ಎರಡನೇ ವಿವಾಹವಾಗಿದ್ದಾಳೆ. ಸ್ಥಳೀಯ ಮೌಲ್ವಿಯೊಬ್ಬನ ಕೆಲ ದಿನಗಳ ಹಿಂದೆ ಮುಹಮ್ಮದ್ ಆಸೀಫ್ -ಸೀಮಾ ಇನಾಂದಾರ್ ನಿಖಾ ಆಗಿದ್ದಾರೆ. ಈ ಫೋಟೋಗಳನ್ನು ಮುಹಮ್ಮದ್ ಆಸೀಫ್ ತನ್ನ ಪುತ್ರನಿಗೆ ವಾಟ್ಸಪ್ ಮಾಡಿದ್ದ. ಫೆಬ್ರವರಿ 10 ರಂದು ಮುಹಮ್ಮದ್ ಆಸೀಫ್ ಬೆಳಗಾವಿಯ ಹನುಮಾನ ನಗರದ ಮನೆಗೆ ಬಂದು ಮೊದಲ ಪತ್ನಿ ತಬಸ್ಸುಮ್ ಮೇಲೆ ಹಲ್ಲೆ ಮಾಡಿದ್ದ. ಗಾಯಾಳು ತಬಸ್ಸುಮ್ ಳನ್ನು ಪುತ್ರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದ. ಈ ಹಿನ್ನಲೆಯಲ್ಲಿ ಮಹಿಳೆ ಇದೀಗ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿ ತಮಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ. ನಗರದ ವಸತಿಗೃಹದಲ್ಲಿ ವಾಸ್ತವ್ಯ ಹೂಡಿದ್ದ ಮುಹಮ್ಮದ್ ಆಸೀಫ್ ಇನಾಂದಾರ್ ಹಾಗೂ ಸೀಮಾ ಇನಾಂದಾರ್ರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ತಬಸ್ಸುಮ್ ಅವರು ಮಾಧ್ಯಮದವರ ಜೊತೆ ಮಾತನಾಡಿ ಆಸಿಫ್ ಜೊತೆ ನನಗೆ ವಿವಾಹವಾಗಿ 23 ವರ್ಷ ಆಗಿದೆ. ನನಗೆ ಇಬ್ಬರು ಮಕ್ಕಳಿದ್ದಾರೆ. ಹಿರಿಯವ 21 ವರ್ಷದವನಿದ್ದು, ಕಿರಿಯವನಿಗೆ 16 ವರ್ಷದವ. ಕಳೆದ 12 ವರ್ಷಗಳಿಂದ ನನ್ನ ಪತಿ ನನಗೆ ಕಿರುಕುಳ ನೀಡುತ್ತಿದ್ದಾರೆ. ಎಂಟು ದಿನಗಳಿಂದ ಮೊಬೈಲ್ ಬಂದ್ ಮಾಡಿ ನಾಪತ್ತೆಯಾಗಿದ್ದರು. ಕಳೆದ ಗುರುವಾರದಂದು ಬೆಂಗಳೂರಿನಲ್ಲಿರುವ ನನ್ನ ಹಿರಿಯ ಪುತ್ರನಿಗೆ ಫೋಟೋ ಕಳಿಸಿ ತಾನು ಎರಡನೇ ಮದುವೆ ಆಗಿದ್ದಾಗಿ ತಿಳಿಸಿದ್ದಾರೆ. ಪುತ್ರ ಈ ವಿಷಯವನ್ನು ನನಗೆ ತಿಳಿಸಿದ್ದಾನೆ. ಅನಂತರ ನನ್ನ ಗಂಡ ಮನೆಗೆ ಬಂದು ಹಲ್ಲೆ ಮಾಡಿದ್ದಾರೆ. ಇನ್ನು ಮುಂದೆ ನೀನು ಇಲ್ಲಿ ಇರಬಾರದು ಎಂದು ನನಗೆ ಮತ್ತೆ ಹೊಡೆದು, ನಾನು ಬೇರೆ ವಿವಾಹವಾಗಿದ್ದೇನೆ. ಅವಳೊಂದಿಗೆ ಇರುತ್ತೇನೆ ಎಂದು ಹೇಳಿದ್ದಾರೆ. ಆ ಸಂದರ್ಭದಲ್ಲಿ ಹಲ್ಲೆ ಮಾಡಿದ್ದರಿಂದ ನಾನು ಪ್ರಜ್ಞೆತಪ್ಪಿ ಬಿದ್ದೆ. ಬಳಿಕ ನನ್ನ ಉತ್ತರ ನನ್ನ ಆಸ್ಪತ್ರೆಗೆ ದಾಖಲಿಸಿದ. ನನಗೆ ನ್ಯಾಯ ಬೇಕು ಎಂದು ತಬಸ್ಸುಮ್ ದೂರಿದ್ದಾರೆ.