ಬೆಳಗಾವಿ:ಅಪ್ರಾಪ್ತೆ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿ ಬೆಳಗಾವಿಯ ಜಿಲ್ಲಾ ಪೋಕ್ಸೊ ನ್ಯಾಯಾಲಯ ತಮಿಳುನಾಡು ಮೂಲದ ಆರೋಪಿಗೆ 30 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಸೋಮವಾರ ಮಹತ್ವದ ತೀರ್ಪು ಪ್ರಕಟಿಸಿದೆ.
ತಮಿಳುನಾಡಿನ ಹಾಲಿ ಕೊಯಮತ್ತೂರು ಜಿಲ್ಲೆ ಪೂನೇರಾಜಪುರಂನ ಮೂಲತಃ ಜಾಲೋರಾ ಜಿಲ್ಲೆಯ ಸಾ: ಖಾರಾ ಗ್ರಾಮದ ಸುರೇಶ ಜಾವನರಾಮ ಚೌಧರಿ(35)ಶಿಕ್ಷೆಗೊಳಗಾದ ಆರೋಪಿ.
ಬಾಲಕಿ ಅಪ್ರಾಪ್ತೆ ಎಂದು ಗೊತ್ತಿದ್ದರೂ 2022 ರ ಜೂನ್ 20 ರಂದು ಬಾಲಕಿಯ ಪರಿಚಯ ಮಾಡಿಕೊಂಡು ಪೋನ್ ನಲ್ಲಿ ಮಾತನಾಡಿ ಒಬ್ಬರಿಗೊಬ್ಬರು ಪ್ರೀತಿಸತೊಡಗಿದರು. ಒಂದು ದಿನ ಆತ ಬಾಲಕಿಗೆ ಫೋನ್ ಮಾಡಿ ರಾಮದುರ್ಗಕ್ಕೆ ಬರಲು ಹೇಳಿ ಅಲ್ಲಿಯ ಹೋಟೆಲ್ಗೆ ಬಂದಿದ್ದಾನೆ. ಬೆಳಗ್ಗೆ 8.30 ಕ್ಕೆ ಬಾಡಿಗೆ ಕಾರಿನ ಮೂಲಕ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ತೆರಳಿದ್ದಾನೆ.
ಮೊದಲೇ ಎರಡು ಟಿಕೆಟ್ ಬುಕ್ ಮಾಡಿ ಬೆಂಗಳೂರಿಗೆ ಕರೆದೊಯ್ದ ಬಾಲಕಿಯನ್ನು ಕೊಯಮತ್ತೂರಿಗೆ 2022ರ ಜೂನ್ 28 ರಂದು ಸಂಜೆ 5:00 ಕ್ಕೆ ಕರೆದುಕೊಂಡು ಹೋಗಿದ್ದಾನೆ. ಕೊಯಮತ್ತೂರಿನಿಂದ ಸುಮಾರು 15-20 ಕಿಮೀ ದೂರದ ಮರದಮಲೈ ಶ್ರೀ ಮುರುಗನ್ ದೇವಸ್ಥಾನದ ಬಳಿಯ ಲಾಡ್ಜ್ ಗೆ ಕರೆದುಕೊಂಡು ಹೋಗಿದ್ದಾನೆ.
ಅಲ್ಲಿ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ ಹೊರಗೆ ಬಂದ ಆತ ಆಕೆಯ ಫೋನ್ ಸ್ವಿಚ್ ಆಫ್ ಮಾಡಿ ಅದರಲ್ಲಿನ ಸಿಮ್ ತೆಗೆದು ಮುರಿದು ಹಾಕಿದ್ದಾನೆ. ಇಬ್ಬರೂ ಬಸ್ ಮೂಲಕ ಕೇರಳಕ್ಕೆ ಹೋಗಿದ್ದಾರೆ. ಅಲ್ಲಿಂದ ರೈಲ್ವೆ ಮೂಲಕ ಗುಂಡಕಲ್ ಎಂಬಲ್ಲಿಗೆ ಹೋಗಿದ್ದಾರೆ. ನಂತರ ಮುಂಬೈಗೆ ರೈಲ್ವೆ ಮೂಲಕ ಹೋಗುವಾಗ ಸೊಲ್ಲಾಪುರ ಬಳಿ ದೌಂಡ್ ರೈಲ್ವೆ ಸ್ಟೇಷನ್ ದಲ್ಲಿ ನಿಲ್ದಾಣದಲ್ಲಿ ಇವರು ಪೊಲೀಸರಿಗೆ ಸಿಕ್ಕಿದ್ದಾರೆ.
ಈ ಅಪರಾಧಕ್ಕೆ ಸಂಬಂಧಿಸಿ ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐ.ಆರ್. ಪಟ್ಟಣಶೆಟ್ಟಿ ತನಿಖೆ ಮಾಡಿ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯ-01 ಬೆಳಗಾವಿ ಈ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ಪ್ರಕರಣದ ವಿಚಾರಣೆ ನಡೆಸಿ ಒಟ್ಟು 8 ಸಾಕ್ಷಿಗಳ ವಿಚಾರಣೆ, 54 ದಾಖಲೆ ಮತ್ತು 13 ಮುದ್ದೆ ಮಾಲುಗಳ ಆಧಾರದ ಮೇಲೆ ಆರೋಪಿ ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು ತೀರ್ಪು ನೀಡಿದ್ದಾರೆ.
ಆರೋಪಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ.10,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂ. 4 ಲಕ್ಷ ಪರಿಹಾರ ಧನ ಪಡೆಯಲು ಆದೇಶಿಸಿದ್ದಾರೆ ಮತ್ತು ಪರಿಹಾರದ ಹಣವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಐದು ವರ್ಷಗಳವರೆಗೆ ಠೇವಣಿಯಾಗಿ ಇಡಲು ನ್ಯಾಯಾಲಯ ಆದೇಶಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಎಲ್. ವಿ.ಪಾಟೀಲ ಪ್ರಕರಣ ನಡೆಸಿ ವಾದ ಮಂಡಿಸಿದ್ದರು.