ಬೆಳಗಾವಿ: ಖ್ಯಾತ ಉದ್ಯಮಿ ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ವೇಳೆ ಇದೀಗ ಮಹತ್ವದ ಸಂಗತಿ ಒಂದು ಬಯಲಾಗಿದೆ. ಆರೋಪಿಗಳು ಸಂತೋಷ ಪದ್ಮಣ್ಣವರ ಅವರ ಕೊಲೆಗೈಯ್ಯಲು ಇನ್ಸುಲಿನ್ ಚುಚ್ಚುಮದ್ದು ನೀಡಿ ಹೃದಯಾಘಾತಕ್ಕೆ ಪ್ರಯತ್ನಿಸಿರುವ ಘಟನೆ ಈಗ ಬೆಳಕಿಗೆ ಬಂದಿದೆ. ಕೊನೆಗೆ ಸಂಬಂಧಿಸಿದ ಮೂರು ದಿನಗಳ ಹಿಂದಷ್ಟೇ ಬಂಧಿತನಾಗಿರುವ ಗುಳೇದಗುಡ್ಡದ ಮಂಜುನಾಥ ಜೇರಕಲ್ ಈಗ ಪೊಲೀಸರ ಮುಂದೆ ಈ ರಹಸ್ಯವನ್ನು ಬಿಚ್ಚಿಟ್ಟಿದ್ದಾನೆ.
ಸಂತೋಷ ಪದ್ಮಣ್ಣವರ ರಾತ್ರಿ ಊಟ ಮಾಡುವಾಗ ಅಂಬಲಿ ಕುಡಿದಿದ್ದರು. ಪತ್ನಿ ಸರಿತಾ ಉರ್ಫ್ ಉಮಾ,ಅಂಬಲಿಗೆ ನಿದ್ರೆ ಮಾತ್ರೆ ಹಾಕಿದ್ದರು. ನಿದ್ರೆಗೆ ಜಾರಿದ ನಂತರ ಇನ್ಸುಲಿನ್ ಕೊಡುವ ಬಗ್ಗೆ ಯೋಜಿಸಿದ್ದರು. ಇದರಿಂದ ಅವರ ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ ಹೃದಯಘಾತ ಆಗುವುದೆಂದು ನಿರ್ಧರಿಸಿದ್ದರು. ಇನ್ಸುಲಿನ್ ನೀಡಲು ಮುಂದಾದಾಗ ಸಂತೋಷ್ ಪರದಾಡಿದ್ದಾರೆ. ಅದರಿಂದ ಬೆದರಿದ ಆರೋಪಿಗಳು ಸಂತೋಷ್ ಗಾಢ ನಿದ್ರೆಗೆ ಜಾರುವವರೆಗೂ ಕಾದು ನಂತರ ಮುಖಕ್ಕೆ ತಲೆದಿಂಬಿಟ್ಟು ಉಸಿರುಗಟ್ಟಿಸಿ ಕೊಲೆಗಯ್ಯಲಾಗಿದೆ ಎಂಬ ಮಾಹಿತಿ ಈಗ ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ.
ಪದ್ಮಣ್ಣವರ ಕೊಲೆ ಪ್ರಕರಣ: ಬೆಳಕಿಗೆ ಬಂತು ಮತ್ತೊಂದು ಮಹತ್ವದ ಸಂಗತಿ
