ಬೆಳಗಾವಿ: ಕಬ್ಬು ಬೆಳೆಗಾರರ ಹೋರಾಟ ಶ್ರಮನಗೊಳಿಸಲು ಸರಕಾರ ಕಸರತ್ತು ನಡೆಸುತ್ತಿದೆ. ಡಿಸೆಂಬರ್ ನಲ್ಲಿ ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಅದಕ್ಕೂ ಮುನ್ನ ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಲು ಈಗ ರಾಜ್ಯ ಸರಕಾರ ಇನ್ನಿಲ್ಲದ ಪ್ರಯತ್ನ ನಡೆಸಿದೆ.
ಕಬ್ಬು ಬೆಳೆಗಾರರ ಹೋರಾಟ ದಿನೇ ದಿನೇ ಕಾವೇರುತ್ತಿದ್ದು, ಈ ಹಂತದಲ್ಲೇ ಅದಕ್ಕೆ ತಾರ್ಕಿಕ ಅಂತ್ಯ ಹಾಡಲು ಸರಕಾರ ಮುಂದಾಗಿರುವುದು ಕಂಡು ಬಂದಿದೆ. ಇನ್ನೊಂದೆಡೆ ಪ್ರಮುಖ ವಿರೋಧಪಕ್ಷವಾದ ಬಿಜೆಪಿ ಈ ಹೋರಾಟಕ್ಕೆ ಇನ್ನಷ್ಟು ಕೆಚ್ಚು ತುಂಬಲು ಮುಂದಾಗಿದೆ.
ಕಬ್ಬಿನ ದರ ನಿಗದಿ ಸಂಬಂಧ ಕಳೆದ ಕೆಲವು ದಿನಗಳಿಂದ ರೈತರು ನಡೆಸುತ್ತಿದ್ದ ಬೃಹತ್ ಹೋರಾಟಕ್ಕೆ ಸರಕಾರ ಸ್ಪಂದಿಸಿದೆ. ಕಬ್ಬು ಬೆಳೆಗಾರರ ಜೊತೆಗೆ ಮಾತುಕತೆ ನಡೆಸಲು ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಇಂದು ಬುಧವಾರ ಮಧ್ಯಾಹ್ನ 12 ಗಂಟೆಗೆ ಕಾನೂನು ಸಚಿವ ಎಚ್.ಕೆ.ಪಾಟೀಲ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರ ಜೊತೆ ಮಾತುಕತೆ ನಡೆಸಲಿದ್ದಾರೆ.
ಗುರ್ಲಾಪುರ ಕ್ರಾಸ್ ಸೇರಿ ಬೆಳಗಾವಿ ಜಿಲ್ಲೆಯ ಹಲವೆಡೆ ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ದಿನೇ ದಿನೆ ಹೋರಾಟ ಹೆಚ್ಚಾಗುತ್ತಿದೆ.


