ಆನೆಗಳು ಭೂಮಿಯ ಮೇಲಿನ ಅತ್ಯಂತ ಸಾಮಾಜಿಕ ಮತ್ತು ಬುದ್ಧಿವಂತ ಪ್ರಾಣಿಗಳಲ್ಲಿ ಒಂದಾಗಿವೆ. ಅವುಗಳು ಮಾತೃಪ್ರಧಾನ ಹಿಂಡುಗಳಲ್ಲಿ ಬದುಕುತ್ತವೆ. ಇಲ್ಲಿ ಅತ್ಯಂತ ವಯಸ್ಸಾದ ಮತ್ತು ಹಿರಿಯ ಹೆಣ್ಣಾನೆ ಇಡೀ ಗುಂಪಿಗೆ ಮಾರ್ಗದರ್ಶನ ನೀಡುತ್ತದೆ. ನೀರು ಮತ್ತು ಆಹಾರಕ್ಕೆ ದಾರಿ ತೋರಿಸುವುದು, ಮರಿಗಳನ್ನು ರಕ್ಷಿಸುವುದು ಮತ್ತು ವಲಸೆ ಹೋಗುವ ಮಾರ್ಗಗಳು, ಅಪಾಯಗಳು ಹಾಗೂ ಬದುಕುಳಿಯುವಿಕೆಯ ಜ್ಞಾನವನ್ನು ಮುಂದಿನ ತಲೆಮಾರುಗಳಿಗೆ ವರ್ಗಾಯಿಸುವುದು ಹಿರಿಯ ಹೆಣ್ಣಾನೆ ಜವಾಬ್ದಾರಿಯಾಗಿರುತ್ತದೆ. ಒಂದು ಮರಿ ಜನಿಸಿದಾಗ, ತಾಯಿಯಿಂದ ಹಿಡಿದು ಹಿರಿಯ ಅಜ್ಜಿಯ ವರೆಗೆ ಇಡೀ ಗುಂಪು ಒಗ್ಗೂಡಿ ಮರಿಯನ್ನು ಪೋಷಿಸಲು ಸಹಾಯ ಮಾಡುತ್ತವೆ. ಇಂತಹದ್ದೇ ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಭಾರತೀಯ ಅರಣ್ಯ ಸೇವೆ ಅಧಿಕಾರಿಯಾದ ಪರ್ವೀನ್ ಕಸ್ವಾನ್ ಅವರು ಹಂಚಿಕೊಂಡಿರುವ 17 ಸೆಕೆಂಡುಗಳ ಈ ವೀಡಿಯೊದಲ್ಲಿ, ರಸ್ತೆಯ ಪಕ್ಕದಲ್ಲಿ ಬಿದ್ದು ಮೇಲಕ್ಕೆ ಹತ್ತಲು ಕಷ್ಟಪಡುತ್ತಿರುವ ಆನೆಯ ಮರಿಯೊಂದನ್ನು ಎರಡು ಆನೆಗಳು ಮೇಲೆ ಹತ್ತಲು ಸಹಾಯ ಮಾಡುತ್ತಿರುವುದು ಕಂಡುಬಂದಿದೆ. ಮರಿಯು ಒದ್ದಾಡುತ್ತಿದ್ದಂತೆ, ತಾಯಿ ಆನೆ ಮತ್ತು ಇನ್ನೊಂದು ಆನೆ ಅದರ ರಕ್ಷಣೆಗೆ ಧಾವಿಸಿ ಬರುತ್ತವೆ. ಈ ಎರಡೂ ಆನೆಗಳು ಮರಿಯನ್ನು ತಳ್ಳಿ ರಸ್ತೆಯ ಮೇಲೆ ಏರಿಸಲು ಯಶಸ್ವಿಯಾಗುತ್ತವೆ.
“ತಾಯಿ-ಮರಿಯ ಜೋಡಿ. ಯಾರೂ ಯಾರನ್ನೂ ಬಿಟ್ಟು ಹೋಗಲಾರರು,” ಎಂದು ಈ ವೀಡಿಯೊಕ್ಕೆ ಕ್ಯಾಪ್ಷನ್ ನೀಡಿದ್ದಾರೆ ಕಸ್ವಾನ್. ಈ ವಿಡಿಯೋದಲ್ಲಿ, ಆನೆಗಳು ರಸ್ತೆ ಹಾದುಹೋಗುವವರೆಗೆ ಜನರ ಗುಂಪು ದೂರದಲ್ಲಿ ತಾಳ್ಮೆಯಿಂದ ಕಾಯುತ್ತಿರುವುದನ್ನು ಕಾಣಬಹುದು.
ಈ ವೀಡಿಯೊ ಆನ್ಲೈನ್ನಲ್ಲಿ ದೊಡ್ಡ ಮಟ್ಟದ ಗಮನ ಸೆಳೆಯುತ್ತಿದೆ. ಆನೆಗಳ ಈ ದೃಢ ಸಂಕಲ್ಪಕ್ಕೆ ಸಾಮಾಜಿಕ ಮಾಧ್ಯಮ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು, “ಪ್ರಕೃತಿಯಲ್ಲಿ ಎಂತಹ ಶುದ್ಧ ಪ್ರೀತಿ. ತಾಳ್ಮೆ ಮತ್ತು ರಕ್ಷಣೆಯ ಅತ್ಯುತ್ತಮ ಪಾಠವೇ ಪ್ರಕೃತಿ,” ಎಂದು ಹೇಳಿದ್ದಾರೆ. ಮತ್ತೊಬ್ಬರು: “ತಾಯಿ-ಅತ್ತೆ-ಮರಿಯ ಬಾಂಧವ್ಯ ನಿಜಕ್ಕೂ ಹೃದಯಸ್ಪರ್ಶಿ ಎಂದು ಪ್ರತಿಕ್ರಿಯಿಸಿದ್ದಾರೆ.
ಮೂರನೆಯವರು, “ಆ ಮೂವರು ರಸ್ತೆಯುದ್ದಕ್ಕೂ ಆತುರದಿಂದ ಹೋಗುವ ರೀತಿ ನೋಡಿದರೆ, ಅವರು ಸಂಚಾರವನ್ನು ತಡೆಹಿಡಿಯಲು ಇಷ್ಟಪಡುವುದಿಲ್ಲ ಎಂದೆನಿಸುತ್ತದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವುಗಳು ಮನುಷ್ಯರಿಗಿಂತ ಉತ್ತಮ ನಾಗರಿಕ ಪ್ರಜ್ಞೆಯನ್ನು ಹೊಂದಿವೆ,” ಎಂದು ಕಾಮೆಂಟ್ ಮಾಡಿದ್ದಾರೆ.
ಕಳೆದ ವಾರ, ಕಸ್ವಾನ್ ಅವರು ಹಂಚಿಕೊಂಡ ಮತ್ತೊಂದು ವೀಡಿಯೊದಲ್ಲಿ ಪ್ರವಾಹದ ನೀರಿನಿಂದ ಇತ್ತೀಚೆಗೆ ರಕ್ಷಿಸಲಾದ 15 ದಿನದ ಆನೆಯ ಮರಿಯನ್ನು ತೋರಿಸಲಾಗಿತ್ತು. ರಕ್ಷಣೆಯ ನಂತರ ಅರಣ್ಯಾಧಿಕಾರಿಗಳು ಮರಿಯನ್ನು ಅದರ ತಾಯಿಯೊಂದಿಗೆ ಸೇರಿಸಲು ಪ್ರಯತ್ನಿಸಿದ್ದರು, ಆದರೆ ದುರದೃಷ್ಟವಶಾತ್ ಆ ಮರಿಯನ್ನು ತಾಯಿ ನಿರಾಕರಿಸಿತ್ತು.