ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ಕೆಲಸ ಮಾಡಲು ಪ್ರಾರಂಭ ; ನೀರಿಗೆ 2 ಸಾವಿರ ಕೋಟಿ ಟೆಂಡರ್: ಸಿಎಂ ಶಿಂಧೆ ಘೋಷಣೆ
ಗಡಿ ಭಾಗದ ನೀರಿನ ಸಮಸ್ಯೆ ನೀಗಿಸಲು ಮುಖ್ಯಮಂತ್ರಿ ಏಕನಾಥ್ ಶಿಂಧೆ ದೊಡ್ಡ ಘೋಷಣೆ ಮಾಡಿದ್ದಾರೆ.
ಮುಂಬೈ:
ಗಡಿ ಭಾಗದ ನೀರಿನ ಸಮಸ್ಯೆಯನ್ನು ಪರಿಹರಿಸಲು ಮಹಿಷಾಳ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು. ಈ ಉದ್ದೇಶಕ್ಕಾಗಿ ಜನವರಿಯಲ್ಲಿ 2000 ಕೋಟಿ ಟೆಂಡರ್ ನೀಡಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಘೋಷಿಸಿದರು.
ಮುಂಬೈನಲ್ಲಿ ಗುರುವಾರ ನಡೆದ ಬಾಳಾಸಾಹೇಬ್ ಠಾಕ್ರೆ ವೈದ್ಯಕೀಯ ನೆರವು ಘಟಕದ ಐದನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಜತ್ ನ ಜನರು ಮಧ್ಯರಾತ್ರಿ ಅರ್ಧ ಗಂಟೆಯ ಹೊತ್ತಿಗೆ ನನ್ನನ್ನು ಭೇಟಿಯಾಗಲು ಬಂದರು. ಅವರು ಕೆಲವು ವಿಷಯಗಳನ್ನು ನನಗೆ ಹೇಳಿದರು. ಅವರಿಗಾಗಿ ಮಹಿಷಾಳ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲು ಸರ್ಕಾರವಾಗಿ ನಾವು ನಿರ್ಧರಿಸಿದ್ದೇವೆ. ಇದಕ್ಕಾಗಿ ಜನವರಿ ತಿಂಗಳಲ್ಲಿ 2 ಸಾವಿರ ಕೋಟಿ ಟೆಂಡರ್ ಕರೆಯಲಾಗುವುದು. ಕೆಲವು ಅಲ್ಪಾವಧಿ ಪರಿಹಾರಗಳನ್ನು ಸಹ ಉಲ್ಲೇಖಿಸಲಾಗಿದೆ. ಮಹಿಷಾಳ ಯೋಜನೆ ಕಾಲುವೆ ಮೂಲಕ ಏಳೆಂಟು ಕೆರೆಗಳನ್ನು ಹೇಗೆ ತುಂಬಿಸಬಹುದು ಎಂಬುದನ್ನೂ ನಿರ್ಧರಿಸುತ್ತಿದ್ದೇವೆ. ಆದ್ದರಿಂದ ಅವರಿಗೆ ತಕ್ಷಣವೇ ಸಹಾಯ ಮಾಡಬಹುದು.
ನಮ್ಮ ಮಹಾರಾಷ್ಟ್ರದಿಂದ ನಮಗೆ ಸೇವೆ ಸಿಗದೆ, ವಂಚಿತರಾಗಿದ್ದೇವೆ ಎಂಬ ಕಾರಣಕ್ಕೆ ಒಂದೇ ಒಂದು ಹಳ್ಳಿ, ಒಬ್ಬ ವ್ಯಕ್ತಿಯೂ ಬೇರೆಡೆಗೆ ಹೋಗಬಾರದು. ಇದು ರಾಜ್ಯ ಸರ್ಕಾರದ ಜವಾಬ್ದಾರಿ. ಗಡಿ ಭಾಗದ ಎಲ್ಲ ಸಂಬಂಧಪಟ್ಟವರಿಗೆ ಅವರ ಬೇಡಿಕೆಯಂತೆ ಆ ಪ್ರದೇಶದಲ್ಲಿ ಕೆಲಸ ಹೇಗೆ ಸಿಗುತ್ತದೆ ಎಂಬುದನ್ನು ಪರಿಶೀಲಿಸುವಂತೆ ಶಂಭುರಾಜ್ ದೇಸಾಯಿ, ಚಂದ್ರಕಾಂತ್ ಪಾಟೀಲ್, ದೀಪಕ್ ಕೇಸರಕರ್ ಅವರೊಂದಿಗೆ ಉದಯ್ ಸಾಮಂತ್ ಅವರಿಗೆ ಸೂಚಿಸಿದ್ದೇನೆ. ಕೂಡಲೇ ಉದಯ್ ಸಾಮಂತ್ ಆ ಭಾಗಕ್ಕೆ ಹೋಗುತ್ತಾರೆ ಎಂದೂ ಶಿಂಧೆ ಹೇಳಿದ್ದಾರೆ.
ಪ್ರವಾಸೋದ್ಯಮ ಸಚಿವ ಲೋಧಾ ಅವರಿಗೆ ಕೌಶಲಾಭಿವೃದ್ಧಿ ಇಲಾಖೆ ಇದೆ, ಅವರಿಗೂ ಸೂಚನೆಗಳನ್ನೂ ನೀಡಲಾಗಿದೆ. ನಾವು ಅವರಿಗೆ ಹೇಗೆ ಕೆಲಸ ನೀಡಬಹುದು, ಉದ್ಯಮವನ್ನು ಅಲ್ಲಿಗೆ ಹೇಗೆ ತರಬಹುದು ಎಂಬುದಕ್ಕೆ ನಾವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಅಲ್ಲಿನ ರಸ್ತೆ ಸಮಸ್ಯೆಗಳ ಕುರಿತು ನಿರ್ಮಾಣ ಇಲಾಖೆ ಸಚಿವ ರವೀಂದ್ರ ಚವ್ಹಾಣ ಅವರಿಗೆ ಸೂಚನೆ ನೀಡಲಾಗಿದೆ. ಅಲ್ಲಿರುವ ಜನರು ಈ ಸೇವೆಗಳು ಮತ್ತು ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಲು, ರಸ್ತೆಗಳಿಲ್ಲದ ಸಂಪರ್ಕದ ಅಗತ್ಯವಿರುವ ಪ್ರದೇಶಗಳನ್ನು ಪರಿಶೀಲಿಸಲು ಸರ್ಕಾರದಲ್ಲಿರುವ ಸಂಬಂಧಿಸಿದ ಮಂತ್ರಿಗಳನ್ನು ಕೇಳಲಾಗಿದೆ. ರಸ್ತೆ ಇಲ್ಲದ ಕಾರಣ ಯಾರೂ ಎಲ್ಲಿಯೂ ಚಿಕಿತ್ಸೆ ಅಥವಾ ಸಂಪರ್ಕದಿಂದ ವಂಚಿತರಾಗುವುದಿಲ್ಲ ಎಂದು ಮುಖ್ಯಮಂತ್ರಿ ಶಿಂಧೆ ಭರವಸೆ ನೀಡಿದರು.
ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಮತ್ತೊಮ್ಮೆ ಬಿಸಿಯೇರಿದೆ. ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಹಿನ್ನೆಲೆಯಲ್ಲಿ ನಡೆದ ಸಭೆಗಳ ಬಳಿಕ ಉಭಯ ರಾಜ್ಯಗಳ ನಾಯಕರ ವಾಕ್ಸಮರ ನಡೆಯುತ್ತಿದೆ. ಬೆಳಗಾವಿ, ಕಾರವಾರ, ನಿಪಾಣಿ ಸೇರಿದಂತೆ 800 ಗ್ರಾಮಗಳ ಗಡಿ ಸಮಸ್ಯೆ ಬಗ್ಗೆ ಮಹಾರಾಷ್ಟ್ರ ಕ್ಯಾತೆ ತೆಗೆದಿದೆ.
ಇತ್ತ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇರವಾಗಿ ಜತ್ ಮತ್ತು ಅಕ್ಕಲಕೋಟ ತಾಲೂಕಿನ ಮೇಲೆ ತಮ್ಮ ಹಕ್ಕು ಚಲಾಯಿಸಿದರು. ಇದರಿಂದ ಕೊನೆಗೆ ಮಹಾರಾಷ್ಟ್ರ ಎಚ್ಚೆತ್ತಿದಂತಿದೆ.