ಜಮಖಂಡಿ: ಜಮಖಂಡಿ ಸಮೀಪದ ಬಂಡಿಗಣಿ ಬಸವಗೋಪಾಲ ನೀಲ ಮಾಣಿಕಮಠದ ಅನ್ನದಾನೇಶ್ವರ ಶ್ರೀಗಳು (76) ನಿಧನರಾಗಿದ್ದಾರೆ.
ಬೆಳಗಾವಿ ಕೆಎಲ್ ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಚಿಕಿತ್ಸೆಗೆ ಸ್ಪಂದಿಸದೇ ನಿಧನರಾಗಿದ್ದಾರೆ.
ಮೃತ ಶ್ರೀಗಳು ಮೂಲ ಅಥಣಿ ತಾಲ್ಲೂಕಿನ ಸವದಿ ಗ್ರಾಮದವರು. ತಮ್ಮ 18ನೇ ವಯಸ್ಸಿನಲ್ಲಿ ಬಂಡಿಗಣಿಗೆ ಬಂದು ಬಸವೇಶ್ವರ ಪೂಜೆ ಮಾಡುತ್ತಾ ಅಲ್ಲಿಯೇ ನೆಲೆಸಿದರು.
ಪಂಢರಪುರ, ತಿರುಪತಿ, ಶ್ರೀಶೈಲ, ಕೊಲ್ಲಾಪುರ ಸೇರಿದಂತೆ ರಾಜ್ಯ ಹಾಗೂ ಅಂತರರಾಜ್ಯದ ಪ್ರಮುಖ ಸ್ಥಳಗಳಲ್ಲಿ ಅನ್ನಪ್ರಸಾದ ಮಾಡುತ್ತಾ ಅನ್ನದಾನೇಶ್ವರ ಎಂಬ ಬಿರುದು ಪಡೆದಿದ್ದರು.
ರಾಜ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ತ್ರಿವಿಧ ದಾಸೋಹ ಪ್ರಶಸ್ತಿ, ಆಪತ್ಪಾಂದವ ಸೇರಿದಂತೆ ಹಲವಾರು ಪ್ರಶಸ್ತಿಗಳು ದೊರೆತಿವೆ.
ಮಠದ ಆವರಣದಲ್ಲಿ ಶನಿವಾರ ಬೆಳಿಗ್ಗೆ 5 ಗಂಟೆಯಿಂದ ಸಂಜೆ 4 ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು. ಸಂಜೆ 5ಕ್ಕೆ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಉತ್ತರಕರ್ನಾಟಕ ಭಾಗದಲ್ಲಿ ಅಪಾರ ಭಕ್ತರನ್ನು ಹೊಂದಿದ್ದು, ಅಂತ್ಯ ಸಂಸ್ಕಾರಕ್ಕೆ ಅಪಾರ ಭಕ್ತರು ಬರುವ ನೀರಿಕ್ಷೆ ಇರುವದರಿಂದ ಪೊಲೀಸ್ ರು ಸೂಕ್ತ ಬಂದೋಬಸ್ತ್ ಮಾಡುತ್ತಿದ್ದಾರೆ.
ಭಕ್ತರ ಮನಗೆದ್ದವರು :
ಜಮಖಂಡಿ ತಾಲೂಕಿನ ಬಂಡಿಗಣಿಯ ಶ್ರೀ ಬಸವಗೋಪಾಲ ನೀಲಮಾಣಿಕಮಠ ಇಂದು ಭಕ್ತಿ, ಶೃದ್ಧೆಯ ಹಾಗೂ ದಾಸೋಹದ ಬೃಹತ್ ಕೇಂದ್ರವಾಗಿ ಬೆಳೆದು ನಿಂತಿದೆ. ದಾಸೋಹವನ್ನು ಮಾಡುವುದರ ಮೂಲಕ ಇಲ್ಲಿಯ ಚಕ್ರವರ್ತಿ ದಾನೇಶ್ವರ ಶ್ರೀಗಳು ಅನ್ನದಾನೇಶ್ವರರಾಗಿ ಪ್ರತಿಯೊಬ್ಬರ ಮನಗಳಲ್ಲೂ ತುಂಬಿಕೊಂಡಿದ್ದರು. ಅವರು ತಮ್ಮ 76ನೇ ವಯಸ್ಸಿನಲ್ಲಿ ಶುಕ್ರವಾರ ಬೆಳಗಿನ ಜಾವ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯೂಸಿರೆಳೆದರು.
ಚಕ್ರವರ್ತಿ ದಾನೇಶ್ವರರು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಸವದಿಯವರು. ಇವರು ಮುಂದೆ ತಮ್ಮ 20ನೇ ವಯಸ್ಸಿನಲ್ಲಿ(1970) ಬಂಡಿಗಣಿಗೆ ಬಂದು ಸ್ವತ: ದುಡಿದು ಬಸವಗೋಪಾಲ ಮಠ ಕಟ್ಟಿಸಿ ತಂದೆ ನಂದೇಶನ ಪೂಜೆ ಮಾಡುತ್ತಾ ಜೀವನ ನಡೆಸಿದ್ದರು.
1970 ರಿಂದ ತಂದೆ ನಂದೇಶ ಶ್ರೀ ವೆಂಕಟೇಶ್ವರ ದಯದಿಂದ ಮೂಲ ಮಠ ಕ್ಷೇತ್ರಗಳಲ್ಲದೆ ಬಂಡಿಗಣಿಯಲ್ಲಿ ಸ್ವಂತ ಸ್ಥಳ ತೆಗೆದುಕೊಂಡು ಮಠವನ್ನು ಸ್ಥಾಪಿಸಿದರು. ಸತ್ಯವೇ ದೇವರು, ನೀತಿಯೇ ತಾಯಿ, ಬಂದು ಬಳಗವೆಂದು ಹೇಳುತ್ತಾ ಬಂದ ಇವರಿಗೆ ದಿನದಿಂದ ದಿನಕ್ಕೆ ಭಕ್ತವೃಂದವನ್ನು ಹೆಚ್ಚುತ್ತಾ ಹೋಯಿತು. ದಾಸೋಹ, ಸಪ್ತಾಹ ಮಾಡುವುದರಿಂದ ಆತ್ಮಕ್ಕೆ ಶಾಂತಿ ಅಷ್ಟೆ ಅಲ್ಲದೇ ಜಗತ್ತಿಗೆ ಶಾಂತಿ ಸಿಗುತ್ತದೆ ಇದರಿಂದ ಎಲ್ಲಾ ಜೀವಾತ್ಮರಿಗೆ ಲೇಸಾಗಲೆಂದು ಕರ್ನಾಟಕ, ಆಂದ್ರಪ್ರದೇಶ ಮತ್ತು ಮಹಾರಾಷ್ಟçದ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಮಠದಿಂದಲೇ ಹಿಟ್ಟಕಿ, ಉಪ್ಪು ಮತ್ತು ಕಟ್ಟಿಗೆ ಹಿಡಿದು ಎಲ್ಲಾ ಸಾಮಾನುಗಳನ್ನು ಪೂರೈಸಿ ಅನ್ನ ದಾಸೋಹವನ್ನು ಮಾಡುತ್ತಾ ಬಂದಿದ್ದರು.
ಪ್ರತಿ ಸೋಮವಾರ ಮಠದಲ್ಲಿ ಸುಮಾರು 10 ರಿಂದ 15 ಸಾವಿರ ಜನ ಭಕ್ತರು ಹಾಗೂ ಪ್ರತಿ ಅಮವಾಸ್ಯೆ ದಿನದಂದು 20 ರಿಂದ 30 ಸಾವಿರ ಜನ ಭಕ್ತರು ಸಪ್ತಾಹದಲ್ಲಿ ಭಾಗವಹಿಸಿ ತಮ್ಮ ಜೀವನದಲ್ಲಿ ಆದ ಅನುಭವಗಳನ್ನು ಮಠದಲ್ಲಿ ಹಂಚಿಕೊಳ್ಳುತ್ತಾರೆ. ಹಿಂದೆ 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಅನುಭವ ನಡೆಯುತ್ತಿತ್ತು ಅದೇ ರೀತಿ ಈ ಕಲಿಯುಗದ ಬಂಡಿಗಣಿಯಲ್ಲಿ ಅನುಭವ ನಡೆಯುತ್ತದೆ. ದಾನೇಶ್ವರರು ಭಕ್ತಿ-ಭಂಡಾರಿ ಬಸವಣ್ಣನವರ ಅವತಾರವೇ ಎಂದು ಪ್ರಖ್ಯಾತಿ ಹೊಂದಿದ್ದರು.
“ದಾಸೋಹ ರತ್ನ” : ಶ್ರೀ ಕ್ಷೇತ್ರ ಯಡೂರ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಚಕ್ರವರ್ತಿ ದಾನೇಶ್ವರರಿಗೆ 2013 ರಲ್ಲಿ ಶ್ರೀಶೈಲ ಕ್ಷೇತ್ರದ ಶ್ರೀಮತಗಿರಿರಾಜ ಸೂರ್ಯ ಸಿಂಹಾಸನನಾದೇಶ್ವರ ಶ್ರೀ 1008 ಡಾ|| ಚನ್ನಸಿದ್ದರಾಮ ಪಾಂಡಿತ್ಯರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳು ದಾನೇಶ್ವರರಿಗೆ ದಾಸೋಹ ರತ್ನ ಎಂಬ ಪ್ರಶಸ್ತಿ ನೀಡಿ ಗೌರವಿಸಿದರು.
ಪ್ರತಿ ವರ್ಷ ಬಂಡಿಗಣಿಮಠದಿಂದ ನೆರವೆರುವ ಬೃಹತ್ ಪ್ರಮಾಣದ ದಾಸೋಹಗಳು :
1. ಆಂಧ್ರಪ್ರದೇಶದ ಶ್ರೀಶೈಲದ ಅಡಕೇಶ್ವರದಲ್ಲಿ ನಿರಂತರ 7 ದಿನಗಳ ಕಾಲ ಅನ್ನಪ್ರಸಾದ ಹಾಗೂ ಮುತೈದೆಯರಿಗೆ ಉಡಿ ತುಂಬುವದು. ಅದೇ ರೀತಿ ಮಹಾನಂದಿ, ಘತ್ತರಗಿಯಲ್ಲಿ ನೆರವೇರುತ್ತದೆ.
2. ಮಹಾರಾಷ್ಟ್ರದಲ್ಲಿ : ಪಂಡರಪುರ, ಹುಲಜಂತಿ, ಗುಡ್ಡಾಪುರ, ತುಳಜಾಪುರ, ಕೊಲ್ಲಾಪುರ.
3. ಕರ್ನಾಟಕದಲ್ಲಿ: ಯಡೂರ, ಕೊಣ್ಣುರ, ಮಾಚಕನೂರ, ಖಿಳೇಗಾಂವ, ಸೋಗಲ, ಎಲ್ಲಮ್ಮನಗುಡ್ಡ, ಚಿಂಚಲಿ, ಸಂಡೂರ, ಕಡಪಟ್ಟಿ, ಚಂದ್ರಗಿರಿ ಧರ್ಮರ ಮಠ ಸಿತಿಮನಿ, ಕಟಗೇರಿ, ಶಿರಸಂಗಿ ಕೊಕಟ್ಟನೂರ, ನಾವಲಗಿ, ಕುಲ್ಲಹಳ್ಳಿ, ಜಮಖಂಡಿ, ಕಟಗೇರಿ, ನಾವಲಗಿ ಮುಂತಾದ ಸ್ಥಳಗಳಲ್ಲಿ ನಡೆಯುತ್ತವೆ.
ಸಪ್ತಾಹಗಳು: ಸವದಿ, ಬೆಳಗಲಿ,ಹಳ್ಳೂರ, ಮುದೋಳ, ಕೇಸರಗೊಪ್ಪ, ಮಧುರಖಂಡಿ, ಪಿ. ಜಿ. ಮಲ್ಲಾಪೂರ, ಅವರಾದಿ, ಅರಳಿವ್ಮಟ್ಟಿ, ಮೂಡಲಗಿ, ದುರದುಂಡಿ ಅರಬಾಂವಿ, ಗುರ್ಲಾಪುರ, ಅಥಣಿ, ಮದಬಾವಿ, ಪರಮಾನಂದವಾಡಿ, ಹಾಲಳ್ಳಿ, ಹೊನಕುಪ್ಪಿ, ಮುದ್ದೇನೂರ, ನಂದಗಾಂವ, ಬೊಂಬಲಾಡ, ಘಟಪ್ರಭಾ, ಇಟ್ನಾಳ, ಜಗದಾಳ, ಚಿಮ್ಮಡ, ಮಹಾಲಿಂಗಪುರ ಜಮಖಂಡಿ ಕಂಕಣವಾಡಿ, ಜನವಾಡ, ಖಾನಟ್ಟಿ, ಹಂದಿಗುಂದ ಸಮೀರವಾಡಿ ಸೇರಿದಂತೆ ಮುಂತಾದ ಸ್ಥಳಗಳಲ್ಲಿ ನಡೆಯುತ್ತದೆ.
ದಾಸೋಹದಲ್ಲಿ ಕೇವಲ ಅನ್ನ ಸಾಂಬರ್ ಮಾಡದೇ ಹುಗ್ಗಿ, ಜೀಲೆಬಿ, ಹೋಳಿಗೆ, ಕಡಬು, ಮಾದಲಿ, ತುಪ್ಪ, ಶಾಂಡಿಗೆ, ಭಜಿ, ಪೂರೆ, ಚಪಾತಿ, ಬಾಜಿ, ಬಿಳಿ ಮತ್ತು ಮಸಾಲಿ ಅನ್ನ, ಸಾಂಬರ, ತರಕಾರಿ ಸೇರಿದಂತೆ ಇನ್ನೂ ಅನೇಕ ತರಹದ ಪದಾರ್ಥಗಳನ್ನು ಮಾಡಿರುತ್ತಾರೆ. ಈ ದಾಸೋಹ ಕಾರ್ಯಕಕ್ಕೆ 500ಕ್ಕೂ ಹೆಚ್ಚು ಜನ ಭಕ್ತರು ಭಾಗವಹಿಸುತ್ತಾರೆ.
ಯಾವುದೇ ಜಾತ್ರೆ ಉತ್ಸವ ಇರಲಿ ಬಂದು ಕೇಳುವ ಭಕ್ತರಿಗೆ ಇಲ್ಲ ಇನ್ನದೇ ದಾಸೋಹ ನೇತೃತ್ವ ವಹಿಸಿ ಆ ಸ್ಥಳಗಳಿಗೆ ತಾವೇ ಸ್ವತಃ ಹೋಗಿ ಅನ್ನ ಪ್ರಸಾದವನ್ನು ಹಂಚಿ ಬರುತ್ತಿದ್ದರು.
ಇಷ್ಟೇ ಅಲ್ಲದೇ ಇನ್ನೂ ಅನೇಕ ಕಡೆ ಪಾರಮಾರ್ಥಿಕ ಸಪ್ತಾಹ ಮತ್ತು ದಾಸೋಹ ಕಾರ್ಯಕ್ರಮಗಳನ್ನು ನಡೆಸುತ್ತಾ ಕಲಿಯುಗದ ದಾಸೋಹ ರತ್ನರಾಗಿ ಭಕ್ತರ ಆರಾಧ್ಯ ದೈವರಾಗಿ ಬೆಳೆದು ನಿಂತಿದ್ದರು.
ಪಾದಯಾತ್ರೆಗಳು: ರಾಜ್ಯದ ವಿವಿಧ ಸ್ಥಳಗಳಾದ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಿಂದ ಬಂಡಿಗಣಿ ಮಠಕ್ಕೆ ಪಾದಯಾತ್ರೆ, ರಾಮದುರ್ಗ ತಾಲ್ಲೂಕ ಕುನ್ನಾಳದಿಂದ ಬಂಡಿಗಣಿ ಮಠಕ್ಕೆ ಪಾದಯಾತ್ರೆ, ರಾಯಭಾಗ ತಾಲ್ಲೂಕ ಇಟ್ನಾಳದಿಂದ ಬಂಡಿಗಣಿ ಮಠಕ್ಕೆ ಪಾದಯಾತ್ರೆ ಮೂಲಕ ಸಾವಿರಾರು ಜನ ಆಗಮಿಸಿ ಸಪ್ತಾಹ ಕಾರ್ಯಕ್ರಮವನ್ನು ನಡೆಸುತ್ತಾರೆ.
ಒಟ್ಟಿನಲ್ಲಿ ಬಂಡಿಗಣಿಯ ಮಠ ಜ್ಞಾನ, ದಾಸೋಹ, ಧಾರ್ಮಿಕ ಚಿಂತನಾ ಕೇಂದ್ರವಾಗಿ ಮಾರ್ಪಪಟ್ಟಿದ್ದು, ಅಂತಹ ಕೇಂದ್ರದಲ್ಲಿ ಇಂದು ಲಕ್ಷಾಂತ್ರ ಭಕ್ತರು ಶ್ರೀಗಳ ಅಗಲಿಕೆಯಿಂದ ದುಖಃಸಾಗರದಲ್ಲಿ ಮುಳುಗಿದ್ದಾರೆ. ಅಪ್ಪ ಅಪ್ಪಾ ಎಂದು ರೋಧಿಸುತ್ತಿರುವ ಭಕ್ತರಿಗೆ ಯಾರು ಸಮಾದಾನ ಪಡಿಸುವರು.
ಎಷ್ಟೋ ಭಕ್ತಾದಿಗಳು ಸರಾಯಿಯಿಂದ ವ್ಯಸನ ಮುಕ್ತಾರಾಗಿದ್ದಾರೆ. ಯಾವುದೇ ರೋಗಗಳು ಬಂದರೆ ಪ್ರಸಾದದಿಂದ ಹೋಗುತ್ತದೆ. “ಬೂದಿ ಹಚ್ಚಿದರೆ ಹೋದಿತೋ ಬಹುರೋಗ” ಎಂದು ಬಂಡಿಗಣಿಮಠಕ್ಕೆ ಶುದ್ದವಾದ ಬಾವ ಭಕ್ತಿ ಇಟ್ಟು ಸುಳ್ಳು ತುಡಗತನ ಬಿಟ್ಟು ದೇವರ ಜ್ಞಾನಮಾಡಿದರೆ ಬೇಡಿದನ್ನು ಕೊಡುವಂತಾಹ ನಮ್ಮ ದಾನೇಶ್ವರ ಅಪ್ಪಾಜಿ ಇದ್ದಾರೆ. ಕಲಿಯುಗದಲ್ಲಿ ಈ ದಾಸೋಹ ಸಪ್ತಾಹ ಮಾಡುವುದು ಶ್ಲಾಘನೀಯ.


