ಬೆಳಗಾವಿ : ಬೆಳಗಾವಿಯ ಪ್ರತಿಷ್ಠಿತ ಬಿಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರ ಆಯ್ಕೆ ಅಕ್ಟೋಬರ್ 8ರಂದು ನಡೆಯಲಿದ್ದು, ಮಾಜಿ ಸಂಸದ ಹಾಗೂ ಸಹಕಾರಿ ಧುರೀಣ ಅಣ್ಣಾ ಸಾಹೇಬ್ ಜೊಲ್ಲೆ ಅವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಹೆಚ್ಚಿನ ನಿರ್ದೇಶಕರು ಅವರನ್ನು ಬೆಂಬಲಿಸಿದ್ದಾರೆ. ಹೀಗಾಗಿ ಅವರ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ನಿಪ್ಪಾಣಿ, ಚಿಕ್ಕೋಡಿ ತಾಲೂಕಿನಲ್ಲಿ ನಿರ್ದೇಶಕರ ಆಯ್ಕೆ ಸಂಬಂಧ ನಡೆದ ಬೆಳವಣಿಗೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ರಾಜೀನಾಮೆ ನೀಡಿದ್ದರು. ಇದರಿಂದ ತೆರವಾಗಿರುವ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಅಣ್ಣಾ ಸಾಹೇಬ್ ಜೊಲ್ಲೆ ಅವರು ಆಯ್ಕೆಯಾಗುವುದು ಇದೀಗ ಬಹುತೇಕ ಖಚಿತವಾಗಿದೆ.
ಮೇ ತಿಂಗಳಿನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಣ್ಣಾ ಸಾಹೇಬ್ ಜೊಲ್ಲೆ ಮತ್ತೆ ಚಿಕ್ಕೋಡಿಯಿಂದ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ಆಗ ಬಿಜೆಪಿಯಿಂದ ಮಾಜಿ ಸಂಸದ ರಮೇಶ ಕತ್ತಿ ಅವರು ಸಹ ಹುರಿಯಾಳು ಆಗಿದ್ದರು. ಆದರೆ ಅಣ್ಣಾ ಸಾಹೇಬ್ ಜೊಲ್ಲೆ ಅವರು ರಮೇಶ ಕತ್ತಿ ಅವರನ್ನು ಹಿಂದಿಕ್ಕಿ ಮತ್ತೊಮ್ಮೆ ಟಿಕೆಟ್ ಪಡೆಯಲು ಯಶಸ್ವಿಯಾಗಿದ್ದರು. ಆದರೆ, ಈ ಬೆಳವಣಿಗೆಗಳಿಂದ ರಮೇಶ ಕತ್ತಿ ಅವರು ಸಕ್ರಿಯವಾಗಿ ಅಣ್ಣಾ ಸಾಹೇಬ್ ಜೊಲ್ಲೆ ಅವರ ಚುನಾವಣಾ ಪ್ರಚಾರಕ್ಕೆ ಬಂದಿರಲಿಲ್ಲ ಎನ್ನುವುದು ಅಣ್ಣಾ ಸಾಹೇಬ್ ಅವರ ಅಂತರಂಗವಾಗಿದೆ. ಇವರಿಂದ ಪಕ್ಷಕ್ಕೆ ಹಾನಿಯಾಗಿದೆ ಎಂದು ಅವರು ಬಂಡಾಯ ಎದ್ದು, ಕೊನೆಗೂ ಇದೀಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಚಿತ್ತ ಹರಿಸಿದ್ದಾರೆ.