ಅಮರಾವತಿ : ಆಂಧ್ರಪ್ರದೇಶ ವಿಧಾನಸಭೆ ಚುನಾವಣೆ ಮತಗಳ ಎಣಿಕೆ ಪ್ರಗತಿಯಲ್ಲಿದೆ, ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ) ಪ್ರಚಂಡ ವಿಜಯದತ್ತ ಸಾಗುತ್ತಿದೆ.
ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಕುಪ್ಪಂ ಕ್ಷೇತ್ರದಲ್ಲಿ 893 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದರೆ, ಜೆಎಸ್ಪಿ ಮುಖ್ಯಸ್ಥ ಪವನ ಕಲ್ಯಾಣ ಪಿಠಾಪುರಂ ವಿಧಾನಸಭೆಯಿಂದ 7,997 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ಒಟ್ಟು 175 ಸ್ಥಾನಗಳಲ್ಲಿ ಎನ್ಡಿಎ ೧೩೭ ಸ್ಥಾನಗಳಲ್ಲಿ ( ಟಿಡಿಪಿ 116 ಸ್ಥಾನಗಳಲ್ಲಿ, ಜನಸೇನಾ ಪಾರ್ಟಿ 15 ಹಾಗೂ ಬಿಜೆಪಿ 6) ಮುಂದಿದೆ. ಮುಖ್ಯಮಂತ್ರಿ ಜಗ್ನಮೋಹ ರೆಡ್ಡಿಯ ವೈಎಸ್ಆರ್ಸಿಪಿ ಪಕ್ಷವು 22 ಸ್ಥಾನಗಳಲ್ಲಿ ಮಾತ್ರ ಮುಂದಿದೆ.
ಆಂಧ್ರ ಪ್ರದೇಶ ವಿಧಾನಸಭೆಯು 175 ಸ್ಥಾನಗಳನ್ನು ಹೊಂದಿದೆ ಮತ್ತು ಬಹುಮತ ಪಡೆದು ಸರ್ಕಾರ ರಚಿಸಲು 88 ಸ್ಥಾನಗಳು ಬೇಕು.
2019 ರ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ವೈಎಸ್ಆರ್ಸಿಪಿ 151 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಮತ್ತು ವೈಎಸ್ ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾದರು. ಅಧಿಕಾರದಲ್ಲಿರುವ ಟಿಡಿಪಿ ಕೇವಲ 23 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಜೆಎಸ್ಪಿ ಒಂದೇ ಒಂದು ಸ್ಥಾನವನ್ನು ಗೆದ್ದಿತ್ತು, ಬಿಜೆಪಿ ಹಾಗೂ ಕಾಂಗ್ರೆಸ್ಸಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. 2014 ರ ಆಂಧ್ರಪ್ರದೇಶ ಚುನಾವಣೆಯಲ್ಲಿ, ಟಿಡಿಪಿಯು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತು ಮತ್ತು ಒಟ್ಟಿಗೆ ಅವರು 106 ಸ್ಥಾನಗಳನ್ನು (ಟಿಡಿಪಿ 102 ಮತ್ತು ಬಿಜೆಪಿ 4) ಗೆದ್ದಿತ್ತು. ಮತ್ತು ವೈಎಸ್ಆರ್ಸಿಪಿ 67 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.