ರೈಲು ಸೇರಿದಂತೆ ಪ್ರತಿಯೊಂದು ಯೋಜನೆಯಲ್ಲಿ ಬೆಳಗಾವಿಗೆ ಸತತ ಅನ್ಯಾಯವಾಗುತ್ತಿತ್ತು. ಆದರೆ, ಸುರೇಶ ಅಂಗಡಿ ಕೇಂದ್ರ ರೈಲ್ವೆ ಖಾತೆ ಸಚಿವರಾಗಿ ನೇಮಕಗೊಂಡ ನಂತರ ರೈಲ್ವೆ ಯೋಜನೆಗಳು ಬೆಳಗಾವಿಗೆ ಹರಿದು ಬಂದವು. ಅವರ ಅಕಾಲಿಕ ನಿಧನದಿಂದ ಬೆಳಗಾವಿಗೆ ಬರಬೇಕಿದ್ದ ಹಲವು ಯೋಜನೆಗಳು ಎಂದಿನಂತೆ ಅನ್ಯ ನಗರಗಳ ಪಾಲಾಗುತ್ತಿವೆ. ಇದೀಗ ಅತಿ ವೇಗದ ರೈಲು ಗಳಲ್ಲಿ ಒಂದಾಗಿರುವ ವಂದೇ ಭಾರತ
ರೈಲ್ವೆ ಧಾರವಾಡದವರೆಗೂ ಬರಲಿದ್ದು, ಇದು ಬೆಳಗಾವಿವರೆಗೂ ವಿಸ್ತರಣೆಯಾದರೆ ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆಯ ಜನತೆ ರಾಜಧಾನಿ ಬೆಂಗಳೂರು ತಲುಪುವುದು ಸುಲಭವಾಗಲಿದೆ.
ಬೆಳಗಾವಿ :
ಅತ್ಯಂತ ವೇಗವಾಗಿ ಸಂಚರಿಸುವ ವಂದೇ ಭಾರತ ರೈಲು ಧಾರವಾಡ- ಬೆಂಗಳೂರು ನಡುವೆ ಸಂಚಾರ ನಡೆಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಆದರೆ, ಇದನ್ನು ಬೆಳಗಾವಿಗೆ ಏಕೆ ವಿಸ್ತರಿಸಬಾರದು ಎನ್ನುವುದು ಬೆಳಗಾವಿ ಜನತೆಯ ಒಕ್ಕೊರಲ ಪ್ರಶ್ನೆಯಾಗಿದೆ.
ಬೆಳಗಾವಿಯ ಜನಪ್ರಿಯ ಸಂಸದೆ ಮಂಗಲಾ ಅಂಗಡಿ ಅವರು ವಂದೇ ಭಾರತ ರೈಲನ್ನು ಬೆಳಗಾವಿಗೆ ತರುವಲ್ಲಿ ತಮ್ಮದೇ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ಯಶಸ್ವಿಯಾಗುವರೆ ಕಾದು ನೋಡಬೇಕು.
ಈ ಹಿಂದೆ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಂಗಲಾ ಅಂಗಡಿ ಅವರ ಪತಿ ಸುರೇಶ ಅಂಗಡಿ ಅವರು ಕೇಂದ್ರ ರೈಲ್ವೆ ಖಾತೆಯ ಸಹಾಯಕ ಸಚಿವರಾಗಿ ಎಲ್ಲಾ ರೈಲುಗಳು ಹಾಗೂ ರೈಲು ವ್ಯವಸ್ಥೆಯನ್ನು ಬೆಳಗಾವಿಗೆ ವಿಸ್ತರಿಸುವಲ್ಲಿ ಅತ್ಯುತ್ಸಾಹ ತೋರಿದ್ದರು. ಅವರ ಆಸಕ್ತಿ ಫಲವಾಗಿ ಎಲ್ಲಾ ಸೌಲಭ್ಯಗಳು ಬೆಳಗಾವಿ ಜಿಲ್ಲೆಗೆ ಹರಿದು ಬಂದಿದ್ದವು. ಆದರೆ, ಅವರ ಅಕಾಲಿಕ ನಿಧನದ ನಂತರ ಬೆಳಗಾವಿಗೆ ಬರುವ ಸೌಲಭ್ಯಗಳು ಶಾಶ್ವತವಾಗಿ ನಿಂತೇ ಹೋಗಿವೆ. ಇದೀಗ ಧಾರವಾಡ-ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರದ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ ಅವರು ನೈರುತ್ಯ ರೈಲ್ವೆ ಧಾರವಾಡ ರೈಲ್ವೆ ನಿಲ್ದಾಣ ಲೋಕಾರ್ಪಣೆಗೊಳಿಸಿ ಭರವಸೆ ನೀಡಿದ್ದಾರೆ.
ಭಾರತದಲ್ಲಿ ಅತಿ ವೇಗವಾಗಿ ಚಲಿಸುವ ರೈಲು ಬೆಂಗಳೂರಿನಿಂದ ಹುಬ್ಬಳ್ಳಿಗೆ ಕೇವಲ ನಾಲ್ಕೂವರೆ ಗಂಟೆಗಳ ಅವಧಿಯಲ್ಲಿ ತಲುಪುವುದು ವಿಶೇಷವಾಗಿದೆ. ಸದ್ಯ ಬಸ್ಸು ಮತ್ತು ರೈಲುಗಳಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರು ತಲುಪಬೇಕಾದರೆ ಏಳೆಂಟು ಗಂಟೆ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹಾಲಿ ಬೆಳಗಾವಿ ಸಂಸದೆ ಮಂಗಲಾ ಅಂಗಡಿ ಅವರು ವಂದೇ ಭಾರತ ಅತಿ ವೇಗದ ರೈಲನ್ನು ಬೆಂಗಳೂರು-ಧಾರವಾಡ ಮಾರ್ಗವಾಗಿ ಬೆಳಗಾವಿಗೆ ತರುವಲ್ಲಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ಯಶಸ್ವಿಯಾಗಬೇಕು ಎನ್ನುವುದು ಜಿಲ್ಲೆಯ ಜನತೆಯ ಒತ್ತಾಸೆಯಾಗಿದೆ.