ಕಾರವಾರ:
ಸುಮಾರು 70 ವರ್ಷದ ವೃದ್ಧರೊಬ್ಬರ ಮೇಲೆ ಕರಡಿ ದಾಳಿ ಮಾಡಿದ್ದು, ಅವರು ಪವಾಡ ಸದೃಶರೀತಿಯಲ್ಲಿ ಪಾರಾಗಿ ಬಂದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ತಿಂಬಾಲಿ ಎಂಬ ಗ್ರಾಮದ ಬಳಿ ನಡೆದಿದೆ ಎಂದು ವರದಿಯಾಗಿದೆ.
ಕರಡಿ ದಾಳಿಯಿಂದ ವೃದ್ಧಿ ಕಣ್ಣುಗುಡ್ಡೆಗೆ ಬಲವಾದ ಏಟುಬಿದ್ದಿದ್ದರೂ ವೃದ್ಧ 2 ಕಿಮೀ ನಡೆದುಕೊಂಡು ಬಂದಿದ್ದು, ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ಘಟನೆ ಇಂದು ಗುರುವಾರ ಮಧ್ಯಾಹ್ನ ಸಂಭವಿಸಿದ್ದು ಗಾಯಗೊಂಡ ವೃದ್ಧನನ್ನು ವಿಠ್ಠಲ ಶೆಳಾಕೆ (70) ಎಂದು ಗುರುತಿಸಲಾಗಿದೆ. ಶಳಾಕೆ ರಾಮನಗರದಿಂದ ತಿಂಬೋಲಿ ಗ್ರಾಮಕ್ಕೆ ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕರಡಿ ದಾಳಿ ನಡೆಸಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಕರಡಿ ಜೊತೆಗೆ ಹೋರಾಟದ ವೇಳೆ ಅವರ ಒಂದು ಕಣ್ಣು ಗುಡ್ಡೆ ಕಿತ್ತು ಬಂದಿದೆ ಎನ್ನಲಾಗಿದ್ದು, ಇನ್ನೊಂದು ಕಣ್ಣಿಗೂ ಗಾಯ ಉಂಟುಮಾಡಿದೆ. ಆದರೆ, ವೃದ್ಧ ದೃತಿಗೆಡದೆ ಧೈರ್ಯದಿಂದ ಕರಡಿ ವಿರುದ್ಧ ಹೋರಾಡುತ್ತ ಬೊಬ್ಬೆ ಹೊಡೆದಿದ್ದಾರೆ. ಇದರಿಂದ ಕರಡಿ ಗಾಬರಿಯಿಂದ ಕಾಲ್ಕಿತ್ತಿದೆ ಎನ್ನಲಾಗಿದೆ. ತೀವ್ರ ರಕ್ತಸ್ರಾವವಾಗುತ್ತಿದ್ದರೂ ವೃದ್ಧ ಸುಮಾರು ಎರಡು ಕಿ.ಮೀ. ನಡೆದು ಜೀವ ಉಳಿಸಿಕೊಂಡಿದ್ದಾರೆ.
ಶಳಾಕೆ ಅವರಿಗೆ ಗಂಭೀರ ಗಾಯವಾಗಿದ್ದು ಅವರಿಗೆ ರಾಮನಗರದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಆಸ್ಪತ್ರೆಗೆ ಒಯ್ಯಲಾಗಿದೆ. ಈ ಮಧ್ಯೆ, ಕರಡಿ ದಾಳಿಯು ಆ ಪ್ರದೇಶದ ಜನರಲ್ಲಿ ಭಯ ಮತ್ತು ಆತಂಕಕ್ಕೆ ಕಾರಣವಾಗಿದೆ.