ಗದಗ: ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ ಮುಂದುವರಿದಿದ್ದು, ಉತ್ಖನನ ಸ್ಥಳ ಪಕ್ಕದ ಗೋಡೆಯಲ್ಲಿ ಪುರಾತನ ಕಾಲದ ಶಿವಲಿಂಗವೊಂದು ಪತ್ತೆಯಾಗಿದೆ.
ಲಕ್ಕುಂಡಿಯಲ್ಲಿನ ಕೋಟೆ ಗೋಡೆಯ ಪಕ್ಕದಲ್ಲಿದ್ದ ಶಾಲಾ ಕಟ್ಟಡವನ್ನು ಕೆಡಹುವಾಗ ಅಲ್ಲಿ ಪುರಾತನ ಕಾಲದ ಶಿವಲಿಂಗ ಪತ್ತೆಯಾಗಿದೆ. ಲಕ್ಕುಂಡಿಯಲ್ಲಿ ಮನೆ ಬಳಿ ಸಿಕ್ಕ ಆಭರಣಗಳನ್ನು ಕುಟುಂಬವೊಂದು ಸರ್ಕಾರಕ್ಕೆ ಹಸ್ತಾಂತರಿಸಿದ ಬಳಿಕ ಗ್ರಾಮದಲ್ಲಿ ಉತ್ಖನನ ಕಾರ್ಯವನ್ನು ಆರಂಭಿಸಲಾಗಿತ್ತು.
ಈ ಲಿಂಗವು ಬಹಳ ಹಳೆಯ ಕಾಲದ್ದಾಗಿರಬಹುದು ಎಂದು ಸ್ಥಳೀಯರು ಊಹಿಸಿದ್ದಾರೆ.
ಪುರಾತತ್ವ ಇಲಾಖೆ ಅಧಿಕಾರಿಗಳು ಈ ಪ್ರಾಚ್ಯಾವಶೇಷವನ್ನು ವಶಕ್ಕೆ ಪಡೆದಿದ್ದು,ಇದು ಯಾವ ಕಾಲಮಾನಕ್ಕೆ ಸೇರಿದ್ದು ಎಂಬ ಬಗ್ಗೆ ಅದು ಪತ್ತೆ ಮಾಡಬೇಕಿದೆ.
ಮೊದಲಿಗೆ ಈ ಪ್ರದೇಶ ಸಪ್ತ ಗ್ರಾಮಗಳ ಅಗ್ರಹಾರವಾಗಿತ್ತು. ಇದು ಸೊಕಮನಕಟ್ಟಿ, ತಂಗಾಬೆಂಚಿ, ಜವಳಬೆಂಚಿ, ನರಸಿಪುರ, ಮೊಟಬಸಪ್ಪ, ಬೂದಿಬಸಪ್ಪ, ಲಕ್ಕುಂಡಿ ಗ್ರಾಮಗಳನ್ನು ಒಳಗೊಂಡಿತ್ತು.
ವಿಜಯನಗರ ಅರಸರ ಆಳ್ವಿಕೆ ನಂತರ ಏಳು ಗ್ರಾಮದ ಜನರು ಲಕ್ಕುಂಡಿಗೆ ಬಂದು ನೆಲೆಸಿದರು. ಇಲ್ಲಿ ನಾಣ್ಯಗಳನ್ನು ತಯಾರಿಸುವ ಟಂಕಸಾಲೆಗಳಿದ್ದವು ಎಂಬಿತ್ಯಾದಿ ಇತಿಹಾಸವಿದೆ.


