ಕಾರವಾರ:
ಸ್ವಿಚ್ ಬೋರ್ಡಿಗೆ ಹಾಕಿದ್ದ ಮೊಬೈಲ್ ಚಾರ್ಜರ್ ವೈಯರ್ ಅನ್ನು ಮಗು ಬಾಯಲ್ಲಿ ಕಚ್ಚಿದ ನಂತರ ವಿದ್ಯುತ್ ಪ್ರಹರಿಸಿ 8 ತಿಂಗಳ ಮಗು ಸಾವಿಗೀಡಾದ ಘಟನೆ ಕಾರವಾರ ತಾಲ್ಲೂಕಿನ ಸಿದ್ದರದಲ್ಲಿ ಇಂದು ಮಂಗಳವಾರ ನಡೆದಿದೆ.
ಸಿದ್ದರದ ಸಂತೋಷ ಕಲ್ಗುಟಕರ, ಸಂಜನಾ ಕಲ್ಗುಟಕರ ದಂಪತಿಯ ಎಂಟು ತಿಂಗಳ ಹೆಣ್ಣು ಮಗು ಸಾನಿಧ್ಯ ಎಂಬ ಪುಟ್ಟ ಮಗು ಮೃತಪಟ್ಟಿದೆ. ಇಂದು (ಆಗಸ್ಟ್ ೨) ಬೆಳಿಗ್ಗೆ ಮನೆಯಲ್ಲಿ ಸ್ವಿಚ್ ಬೋರ್ಡ್ ಗೆ ಹಾಕಿದ್ದ ಮೊಬೈಲ್ ಚಾರ್ಜರ್ ಬಂದ ಮಾಡಿರಲಿಲ್ಲ. ಆದರೆ ಇದೇ ಸಮಯದಲ್ಲಿ ಮಗು ಆನ್ ಇದ್ದ ಚಾರ್ಜರ್ ವೈಯರ್ ಅನ್ನು ಬಾಯಿಗೆ ಹಾಕಿಕೊಂಡಿದೆ. ಈ ವೇಳೆ ವಿದ್ಯುತ್ ಪ್ರಹರಿಸಿದ ಪರಿಣಾಮ ಮಗು ಶಾಕ್ ಹೊಡೆದಿದೆ.
ತಕ್ಷಣ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತಾದರೂ ಮಗು ಅಷ್ಟರೊಳಗೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಹೆಸ್ಕಾಂ ನಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದ ಮಗುವಿನ ತಂದೆ ವಿಷಯ ಕೇಳಿ ಅಸ್ವಸ್ತರಾಗಿ ಕುಸಿದು ಬಿದ್ದಿದ್ದು ತಕ್ಷಣ ಸಿದ್ದರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ. ಮಗುವಿನ ಸಾವಿನಿಂದ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ. ಸದ್ಯ ಮೃತ ಮಗುವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.
ಸಂತೋಷ್ ಕಲ್ಗುಟಕರ ದಂಪತಿಗೆ ಎರಡನೇ ಮಗುವಾಗಿತ್ತು. ಹಿರಿಯ ಮಗಳ ಜನ್ಮದಿನ ಕೂಡ ಇಂದೇ ಇದ್ದುದ್ದರಿಂದ ಎಲ್ಲರೂ ಅದರ ಸಂಭ್ರಮದಲ್ಲಿದ್ದರು.
ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.