ಬೆಳಗಾವಿ : ಜಾಗತಿಕ ಸುವಿಖ್ಯಾತ ಶಿಕ್ಷಣ ಸಂಸ್ಥೆಯಾದ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ನೂತನ ಕಾರ್ಯಾಧ್ಯಕ್ಷರಾಗಿ ಅಮಿತ ಕೋರೆಯವರು ಆಯ್ಕೆಯಾಗಿದ್ದಾರೆ. ಕೆಎಲ್ಇ ಪ್ರಧಾನ ಕಚೇರಿಯಲ್ಲಿ ಜರುಗಿದ ನೂತನ ಆಡಳಿತ ಮಂಡಳಿಯ ಸಭೆಯಲ್ಲಿ ಅಮಿತ ಕೋರೆಯವರಿಗೆ ಕೆಎಲ್ಇ ಸಂಸ್ಥೆಯ ಸಾರಥ್ಯವನ್ನು ನೀಡಲಾಯಿತು. ಡಾ.ಪ್ರಭಾಕರ ಕೋರೆ ಅವರು ಸುದೀರ್ಘ 42 ವರ್ಷಗಳ ಅವಧಿಗೆ ಚೇರಮನ್ರಾಗಿ ಸಂಸ್ಥೆಯನ್ನು ಜಾಗತಿಕವಾಗಿ ವಿಸ್ತರಿಸಿದ್ದರು. ಇಂದು ಆ ಸ್ಥಾನವನ್ನು ಅಮಿತ ಕೋರೆಯವರಿಗೆ ಆಡಳಿತ ಮಂಡಳಿಯು ನೀಡಿ ಶುಭ ಕೋರಿದೆ.
1916 ರಲ್ಲಿ ಸ್ಥಾಪನೆಗೊಂಡ ಕೆಎಲ್ಇ ಸೊಸೈಟಿ ದೇಶದ ಪ್ರಮುಖ ಶಿಕ್ಷಣ ಮತ್ತು ಆರೋಗ್ಯ ಸೇವಾ ಸಂಸ್ಥೆಗಳಲ್ಲೊಂದು. ಶಾಲೆಗಳು, ಮಹಾವಿದ್ಯಾಲಯಗಳು, ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸಂಸ್ಥೆಗಳು, ಆಸ್ಪತ್ರೆಗಳು ಸೇರಿದಂತೆ 317 ಕ್ಕೂ ಹೆಚ್ಚು ಅಂಗಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಈ ಸಂಸ್ಥೆ ಶತಮಾನಗಳ ಕಾಲ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಇಂತಹ ಬೃಹತ್ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ 46 ರ ಯುವ ನಾಯಕ ಅಮಿತ್ ಕೋರೆ ಅವರು ಆಯ್ಕೆಯಾಗಿರುವುದು ಗಮನಾರ್ಹವಾಗಿದೆ.
ಅಮಿತ ಕೋರೆ ಅವರು ಕೆಎಲ್ಇ ಸೊಸೈಟಿಯ ಬೋರ್ಡ್ ಆಫ್ ಮ್ಯಾನೇಜ್ಮೆಂಟ್ ಸದಸ್ಯರಾಗಿ 2010 ರಿಂದ ಕಾರ್ಯನಿರ್ವಹಿಸುತ್ತ ಬಂದಿದ್ದಾರೆ. ಆಡಳಿತಾತ್ಮಕ ನಿರ್ಧಾರಗಳು, ವಿಸ್ತರಣೆ ಯೋಜನೆಗಳು ಮತ್ತು ಸಂಸ್ಥೆಯ ದೀರ್ಘಕಾಲಿಕ ದೃಷ್ಟಿಕೋನ ರೂಪಿಸುವಲ್ಲಿ ಅವರು ಸಕ್ರಿಯರಾಗಿ, ಮೌಲಿಕ ಕೊಡುಗೆ ನೀಡಿದವರು. ಶಿಕ್ಷಣ ಕ್ಷೇತ್ರದೊಂದಿಗೆ ಸಹಕಾರ ಹಾಗೂ ಕೈಗಾರಿಕಾ ವಲಯದಲ್ಲಿಯೂ ಅನುಭವ ಹೊಂದಿರುವ ಅಮಿತ ಸರಳತೆ, ಸೌಜನ್ಯತೆಗೆ ಹೆಸರಾದವರು.
ಅಮಿತ ಕೋರೆಯವರು ಶ್ರೀ ಚಿದಾನಂದ ಬಸಪ್ರಭು ಕೋರೆ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನವದೆಹಲಿಯ ನ್ಯಾಷನಲ್ ಫೆಡರೇಶನ್ ಆಫ್ ಕೋ-ಆಪರೇಟಿವ್ ಶುಗರ್ ಫ್ಯಾಕ್ಟರೀಸ್ನ ಉಪಾಧ್ಯಕ್ಷರಾಗಿ, ಶಿವಶಕ್ತಿ ಸಕ್ಕರೆ ಕಾರಖಾನೆಯ ನಿರ್ದೇಶಕರಾಗಿ,
ಹರ್ಮ್ಸ್ ಡಿಸ್ಟಿಲ್ಲರಿ ಪ್ರೈ.ಲಿ. ನ ವ್ಯವಸ್ಥಾಪಕ ನಿರ್ದೇಶಕರಾಗಿ, ಇನಾಂದಾರ ಶುಗರ್ಸ್, ಮರಕುಂಬಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡಾ.ಪ್ರಭಾಕರ ಕೋರೆಯವರು ಕೆಎಲ್ಇ ಸಂಸ್ಥೆಯ ಗೌರವಾನ್ವಿತ ಕಾರ್ಯಾಧ್ಯಕ್ಷರಾಗಿ ಆಯ್ಕೆ:
1984 ರಿಂದ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ 42 ವರ್ಷಗಳ ಸುದೀರ್ಘ ಸೇವೆಯನ್ನು ನೀಡಿ ಸಂಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ದ ಡಾ.ಪ್ರಭಾಕರ ಕೋರೆಯವರ ಮಾರ್ಗದರ್ಶನವನ್ನು ಸಂಸ್ಥೆಯ ಶ್ರೇಯೋಭಿವೃದ್ಧಿಗೋಸ್ಕರ ಪಡೆಯಲು 8.2.2026 ರಂದು ಜರುಗಿದ ಕೆಎಲ್ಇ ಸರ್ವಸಾಧಾರಣ ಸಭೆಯಲ್ಲಿ ಅವರನ್ನು ಗೌರವಾನ್ವಿತ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದೆ.
ಕೆಎಲ್ಇ ಸಂಸ್ಥೆಯ ನೂತನ ಪದಾಧಿಕಾರಿಗಳು:
ಕೆಎಲ್ಇ ಸಂಸ್ಥೆಯ ನೂತನ ಪದಾಧಿಕಾರಿಗಳು:
ಅಧ್ಯಕ್ಷರು : ಶ್ರೀ ಕೌಜಲಗಿ ಮಹಾಂತೇಶ ಶಿವಾನಂದ
ಉಪಾಧ್ಯಕ್ಷರು: ಶ್ರೀ ತಟವಟಿ ಬಸವರಾಜ ಶಿವಲಿಂಗಪ್ಪ
ಗೌರವಾನ್ವಿತ ಕಾರ್ಯಾಧ್ಯಕ್ಷರು: ಡಾ. ಕೋರೆ ಪ್ರಭಾಕರ ಬಸವಪ್ರಭು
ಕಾರ್ಯಾಧ್ಯಕ್ಷರು: ಶ್ರೀ ಕೋರೆ ಅಮಿತ ಪ್ರಭಾಕರ
ಆಡಳಿತ ಮಂಡಳಿಯ ಸದಸ್ಯರು:
ಶ್ರೀ ಬಾಗೇವಾಡಿ ಪ್ರವೀಣ ಅಶೋಕ
ಡಾ. ದೊಡವಾಡ ಪ್ರೀತಿ ಕರಣ
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ
ಶ್ರೀ ಕೊಳ್ಳಿ ಮಲ್ಲಿಕಾರ್ಜುನ ಚನಬಸಪ್ಪ
ಶ್ರೀ ಮೆಟಗುಡ್ ವಿಜಯ ಶ್ರೀಶೈಲಪ್ಪ
ಶ್ರೀ ಮುನವಳ್ಳಿ ಮಂಜುನಾಥ ಶಂಕರಪ್ಪ
ಶ್ರೀ ಮನವಳ್ಳಿ ಜಯಾನಂದ ಉರ್ಫ್ ರಾಜು ಮಹದೇವಪ್ಪ
ಶ್ರೀ ಪಾಟೀಲ ಬಸವರಾಜ ರುದ್ರಗೌಡ
ಡಾ. ಪಾಟೀಲ ವಿಶ್ವನಾಥ ಈರನಗೌಡ
ಶ್ರೀ ಪಾಟೀಲ ಯಲ್ಲನಗೌಡ ಶಿವಮೊಗ್ಗೆಪ್ಪ
ಶ್ರೀ ಪಟ್ಟೇದ ಅನಿಲ ವಿಜಯಬಸಪ್ಪ
ಸಭೆಯಲ್ಲಿ ಎಲ್ಲ ಪದಾಧಿಕಾರಿಗಳು, ಕಾರ್ಯದರ್ಶಿಗಳಾದ ಡಾ.ಬಿ.ಜಿ.ದೇಸಾಯಿ, ಜಂಟಿ ಕಾರ್ಯದರ್ಶಿಗಳಾದ ಡಾ.ಎಸ್.ಎಸ್.ಜಲಾಲಪುರೆ, ಡಾ.ಪಿ.ಆರ್.ಕಡಕೋಳ ಉಪಸ್ಥಿತರಿದ್ದರು.


