ನೀರಾವರಿ ಇಲಾಖೆ ಮುಖ್ಯ ಅಭಿಯಂತರ ಹಾಗೂ ಇತರೆ ಕರ್ನಾಟಕ ನೀರಾವರಿ ಇಲಾಖೆ ಅಧಿಕಾರಿಗಳು ಯಾವುದೇ ಜವಾಬ್ದಾರಿಯನ್ನು ತಾವು ವಹಿಸಿಕೊಳ್ಳುವುದಿಲ್ಲ ತಮ್ಮ ಮೇಲೆ ಬಂದ ಕೆಲಸವನ್ನು ಇನ್ನೊಬ್ಬರ ಮೇಲೆ ಹಾಕಿಕೊಂಡು ನುಣುಚಿಕೊಳ್ಳುವುದು ನೇರವಾಗಿ ಕಂಡುಬಂದಿದೆ. ಈ ಮೂಲಕ ಜಿಲ್ಲೆಯ ಪತ್ರಿಕೆಗಳಿಗೆ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎರಚುವ ಕೆಲಸ ಇಲ್ಲಿ ಮಾಡಲಾಗಿದೆ.
ಬೆಳಗಾವಿ : ಅಥಣಿ ತಾಲೂಕಿನ ಕೊಟ್ಟಲಗಿ ಶ್ರೀ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ ಇಂದು ನಿಗದಿಯಾಗಿದೆ. ಆದರೆ ಇದು ಅತ್ಯಂತ ಮಹತ್ವಕಾಂಕ್ಷಿ ಯೋಜನೆ ಆದರೂ ಚುನಾವಣೆ ಎದುರಲ್ಲಿ ಶಂಕುಸ್ಥಾಪನೆ ನೆರವೇರಿಸುತ್ತಿರುವುದು ಹಲವಾರು ಸಂಶಯಗಳಿಗೆ ಕಾರಣವಾಗಿದೆ. ಅದರಲ್ಲೂ ಜಲಸಂಪನ್ಮೂಲ ಇಲಾಖೆ ಏಕಾಏಕಿ ಎಂಬಂತೆ ದಿಢೀರ್ ಆಗಿ ಶಂಕುಸ್ಥಾಪನೆ ಕಾರ್ಯಕ್ರಮ ಆಯೋಜಿಸುತ್ತಿರುವುದು ರೈತರ ಆಕ್ರೋಶ ಭುಗಿಲೇಳಲು ಕಾರಣವಾಗಿದೆ.
ಕೊಟ್ಟಲಗಿ ನೀರಾವರಿ ಯೋಜನೆ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ. ಆದರೆ ಈ ಬಿರು ಬೇಸಿಗೆಯಲ್ಲಿ ಇದೀಗ ಯೋಜನೆಯನ್ನು ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರ ಈ ಯೋಜನೆಯನ್ನು ಅವಸರದಲ್ಲಿ ಶಂಕುಸ್ಥಾಪನೆ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಅದರಲ್ಲೂ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರವನ್ನು ಗೆಲ್ಲಬೇಕು ಎಂದು ಕಾಂಗ್ರೆಸ್ ಪಣತೊಟ್ಟಿದೆ. ಈ ಹಿನ್ನಲೆಯಲ್ಲಿ ಈ ಯೋಜನೆಗೆ ಇದೀಗ ಚಾಲನೆ ನೀಡಲಾಗುತ್ತಿದೆ. ಆದರೆ ಜಲ ಸಂಪನ್ಮೂಲ ಇಲಾಖೆ ಆಡಿದ್ದೆ ಆಟ ಮಾಡಿದ್ದೆ ನೋಟ ಎಂಬ ಸನ್ನಿವೇಶ ಕಂಡು ಬಂದಿದೆ. ಜಿಲ್ಲೆಯ ಎಲ್ಲಾ ಪತ್ರಿಕೆಗಳಿಗೆ ಜಾಹೀರಾತು ನೀಡಲಾಗಿದೆ. ಆದರೆ ದಶಕಗಳ ಇತಿಹಾಸ ಇರುವ ಕೆಲವೇ ಕೆಲವು ಕನ್ನಡ ಪತ್ರಿಕೆಗಳಿಗೆ ಜಾಹೀರಾತು ನೀಡದೇ ಇರುವ ಕ್ರಮ ಸಂಪಾದಕರ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಜಲ ಸಂಪನ್ಮೂಲ ಇಲಾಖೆ ಸದಾ ಇಂತಹ ಎಡವಟ್ಟುಗಳನ್ನೇ ಮಾಡುತ್ತಿದೆ. ಇಂತಹ ಗೊಂದಲ ಮಾಡುತ್ತಿರುವುದಕ್ಕೆ ಇಲಾಖೆಯ ಅಧಿಕಾರಿಗಳೇ ನೇರಹೊಣೆಗಾರರಾಗಿದ್ದಾರೆ.
ತಮಗೆ ಹೇರಳವಾಗಿ ಕಮಿಷನ್ ಬರುವ ಲಾಭದಾಯಕವಾಗಿ ಮಾತ್ರ ಯೋಚಿಸುವ ಅಧಿಕಾರಿಗಳು ಜಾಹೀರಾತು ಮೂಲದಿಂದ ಲಕ್ಷಾಂತರ ರೂಪಾಯಿಯನ್ನು ತಮ್ಮ ಜೇಬಿಗಿಳಿಸುತ್ತಿರುವುದು ಕಂಡುಬಂದಿದೆ. ಸಿಎಂ ಬಂದಾಗ ಕಾರ್ಯಕ್ರಮಗಳಿಗೆ ಜಾಹೀರಾತು ನೀಡಬೇಕೆಂಬ ವಾರ್ತಾ ಇಲಾಖೆಯ ಕ್ರಮವನ್ನು ನೀರಾವರಿ ಇಲಾಖೆ ಗಾಳಿಗೆ ತೂರಿ ತನ್ನಿಷ್ಟಕ್ಕೆ ನಡೆದುಕೊಂಡಿರುವುದು ಸರಿಯಲ್ಲ.
ಒಟ್ಟಾರೆ ನೀರಾವರಿ ಯೋಜನೆಯನ್ನು ಜಾರಿಗೊಳಿಸುವ ಹೆಸರಿನಲ್ಲಿ ಜಲಸಂಪನ್ಮೂಲ ಇಲಾಖೆ ಕಾರ್ಯಕ್ಕೆ ರೈತರು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.