ಬೆಳಗಾವಿ :
ಇಷ್ಟಲಿಂಗ ಶಿವನ ಸಂಕೇತ. ನಮ್ಮ ಮನೋನಿಗ್ರಹಕ್ಕೆ, ಏಕಾಗ್ರತೆಗೆ ಒಂದು ವಿಧಾನ. ಶಿವನ ಚಕ್ಷರೂಪವಾದ ಲಿಂಗವನ್ನು ನಮ್ಮ ಅಂತರಂಗದಲ್ಲಿ ಧಾರಣ ಮಾಡುವುದು ಅವಶ್ಯ, ಆ ಪೂರ್ವದಲ್ಲಿ ಬಹಿರಂಗದ ಕುರೂಹಾಗಿ ಧರಿಸುವುದು ಅಷ್ಟೇ ಮುಖ್ಯ. ಅನೇಕ ವೈಜ್ಞಾನಿಕ ಸತ್ಯಗಳನ್ನು ಇಷ್ಟಲಿಂಗ ಪೂಜೆ ಹೊಂದಿದೆ ಎಂದು ರತ್ನಾ ಬೆಣಚಮರಡಿ ಹೇಳಿದರು.
ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಬೆಳಗಾವಿ ಜಿಲ್ಲಾ ಘಟಕದ ಆಶ್ರಯದಲ್ಲಿ ಅಮಾವಾಸ್ಯೆ ಅನುಭಾವ ಕಾರ್ಯಕ್ರಮದಲ್ಲಿ ಇಷ್ಟಲಿಂಗ ಪೂಜೆಯ ವೈಜ್ಞಾನಿಕತೆ ಕುರಿತು ಅನುಭಾವ ನೀಡಿದ ಮಾತನಾಡಿದರು.
ಶರಣ ಮಾರ್ಗದಲ್ಲಿ ಸಾಗಿರುವವರು ಸದ್ಗುರು ಮಂತ್ರ ದೀಕ್ಷೆಯೊಂದಿಗೆ ನಮ್ಮ ಕರಸ್ಥಲಕ್ಕೆ ನೀಡಿದ ಇಷ್ಟಲಿಂಗವನ್ನೇ ಪೂಜಿಸಬೇಕು. ಅದು ನಮ್ಮೊಳಗಿನ ದೇವರು, ಅರುಹಿನ ಕುರುಹು, ನಿಜದ ನೆನಹು. ಅದನ್ನು ನಿರೀಕ್ಷಿಸಿ ಧ್ಯಾನಿಸುದರಿಂದ ಏಕಾಗ್ರತೆ ಹೆಚ್ಚುತ್ತದೆ, ಶರೀರದ ನವಚಕ್ರಗಳು ಸಶಕ್ತವಾಗುತ್ತವೆ, ಅನೇಕ ರೋಗ ರುಜಿನಗಳು ವಾಸಿಯಾಗುತ್ತವೆ. ಇಷ್ಟಲಿಂಗವನ್ನು ಎಡಗೈ ಅಂಗೈಯಲ್ಲಿ ಇಟ್ಟು ಪೂಜಿಸುವುದರಿಂದ ಬಲ ಮೆದುಳು ಶಕ್ತಿ ಶಾಲಿಯಾಗುತ್ತದೆ, ಕಣ್ಣಿನ ದೃಷ್ಠಿ ಸುಧಾರಿಸುತ್ತದೆ ಎನ್ನುವ ವಿಚಾರಗಳನ್ನು ವೈಜ್ಞಾನಿಕ ಹಿನ್ನೆಲೆಯೊಂದಿಗೆ ಪೂರಕ ವಚನ ವಿಶ್ಲೇಷಣೆ ಸಹಿತ ಮಾಡಿಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಉಪಾಧ್ಯಕ್ಷೆ
ಡಾ. ಗುರುದೇವಿ ಹುಲೆಪ್ಪನವರಮಠ ಅವರು ಸ್ವರೂಪ ಜ್ಞಾನವು ಎಲ್ಲ ಜ್ಞಾನಗಳಿಗಿಂತ ಶ್ರೇಷ್ಠ ಜ್ಞಾನವಾಗಿದೆ. ತಾನು ಇನ್ನೇನೂ ಅಲ್ಲ, ಸಾಕ್ಷಾತ್ ಶಿವನ ಸ್ವರೂಪನೇ ಆಗಿದ್ದೇನೆ ಎನ್ನುವ ಅರಿವು ಲಿಂಗಾನುಸಂಧಾನದಿಂದ ಮಾತ್ರ ಆಗುತ್ತದೆ. ಆದ್ದರಿಂದ ಲಿಂಗಧ್ಯಾನ ಅತ್ಯವಶ್ಯ ಎಂದರು.
ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಪೂಜ್ಯ ಗುರುಸಿದ್ಧ ಸ್ವಾಮೀಜಿ, ಸಾಧನೆಯ ಸಿದ್ಧಿಗೆ ಜ್ಞಾನ ಮತ್ತು ಕ್ರಿಯೆಗಳ ಅವಶ್ಯ ಕತೆಯಿದೆ. ಇಷ್ಟಲಿಂಗ ಪೂಜೆಯ ಕ್ರಮದ ಜ್ಞಾನ ಮತ್ತು ಆ ಜ್ಞಾನವನ್ನು ಕ್ರಿಯೆ ಗಿಳಿಸುವುದರಿಂದ ಪೂಜೆಯ ಫಲಿತಾಂಶದ ಅನುಭವ ಉಂಟಾಗುತ್ತದೆ. ಆದ್ದರಿಂದ ಎಲ್ಲರೂ ಲಿಂಗಧಾರಣೆ, ಲಿಂಗ ನಿರೀಕ್ಷಣೆಯ ಮೂಲಕ ಪೂಜೆಯ ಫಲಾನುಭವಿಗಳಾಗಬೇಕು ಎಂದರು.
ಶ್ರೀದೇವಿ ಅಂಟಿನ ವಚನ ಪ್ರಾರ್ಥಿಸಿದರು. ಜಯಶ್ರೀ ನಿರಾಕಾರಿ ವಚನ ವಿಶ್ಲೇಷಣೆ ನಡೆಸಿ ಕೊಟ್ಟರು, ಅಖಿಲ ಭಾರತ ವೀರಶೈವ ಮಹಾಸಭೆಯ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಭಾವಿಕಟ್ಟಿ ವಂದಿಸಿದರು. ನ್ಯಾಯವಾದಿ ವಿ.ಕೆ. ಪಾಟೀಲ ಸ್ವಾಗತಿಸಿದರು.