ಧಾರವಾಡ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಿದ ಬೆನ್ನಲ್ಲೇ ಎಲ್ಲಾ ಲಿಂಗಾಯತ ಶಾಸಕರು ಬಿಜೆಪಿ ಬಿಟ್ಟು ಹೊರಬನ್ನಿ ಎಂದು ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದಾರೆ.
ಬಿಜೆಪಿ ಹೈಕಮಾಂಡ್ ಯತ್ನಾಳ್ ಅವರ ಉಚ್ಛಾಟನೆ ಆದೇಶವನ್ನು ವಾಪಸ್ ಪಡೆಯದೇ ಹೋದರೆ ಲಿಂಗಾಯತ ಸಮುದಾಯದ ಎಲ್ಲ ಶಾಸಕರು ಬಿಜೆಪಿ ಬಿಟ್ಟು ಹೊರಬರಬೇಕು ಎಂದು ಹೇಳಿದರು.
ಯತ್ನಾಳ್ ಎಂದಿಗೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಕಾಣದ ಕೈಗಳು ಅವರನ್ನು ಉಚ್ಛಾಟನೆ ಮಾಡುವಂತೆ ಮಾಡಿವೆ. ಕುಟುಂಬ ರಾಜಕಾರಣ ಬೇಡ ಎನ್ನುವುದು ತಪ್ಪೇ? ಯತ್ನಾಳ್ ಏನೇ ಮಾತನಾಡಿದರೂ ಅವರು ಉತ್ತರ ಕರ್ನಾಟಕ, ಹಿಂದುತ್ವದ ಬಗ್ಗೆಯೇ ಮಾತನಾಡಿದ್ದಾರೆ ಎಂದರು.
ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಿ ಬಿಜೆಪಿ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿದೆ. ಇದರಿಂದ ಬಿಜೆಪಿ ಪಕ್ಷಕ್ಕೆ ಹಿನ್ನಡೆಯಾಗಲಿದೆ. ಈಗ ಬಿಜೆಪಿಗೆ 60 ಸ್ಥಾನ ಬಂದಿವೆ. ಮುಂದೆ ಮೂವತ್ತು ಸೀಟು ಕೂಡ ಬರುವದಿಲ್ಲ. ಮೋದಿ ಹಾಗೂ ಅಮಿತ್ ಶಾ ಅವರಿಗೆ ಗೊತ್ತಿರದೇ ಇರುವ ಅಂಶಗಳು ಇಲ್ಲಿವೆ ಎಂದು ಹೇಳಿದರು.