ನವದೆಹಲಿ : ಹೊಸ ವರ್ಷಾಚರಣೆಗೆ ದೇಶಾದ್ಯಂತ ಭರ್ಜರಿ ತಯಾರಿ ನಡೆಯುತ್ತಿರುವಂತೆಯೇ, ಅಖಿಲ ಭಾರತ ಮುಸ್ಲಿಂ ಜಮಾತ್ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಭಾನುವಾರ ಹೊಸ ವರ್ಷಾಚರಣೆಯ ವಿರುದ್ಧ ಫತ್ವಾ ಹೊರಡಿಸಿದ್ದಾರೆ. ಮುಸ್ಲಿಮರು ಇಂತಹ ಆಚರಣೆಗಳಲ್ಲಿ ತೊಡಗಬಾರದು ಎಂದು ಹೇಳಿರುವ ಅವರು, ಷರಿಯಾ ಕಾನೂನಿನ ಪ್ರಕಾರ ಅಪರಾಧಿಗಳೆಂದು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ. ಮುಸ್ಲಿಮರು ಈ ಆಚರಣೆಗಳಲ್ಲಿ ಪಾಲ್ಗೊಳ್ಳುವುದನ್ನು ತಡೆಯಬೇಕು ಎಂದು ಒತ್ತಿ ಹೇಳಿದ್ದಾರೆ.
ವೀಡಿಯೊ ಸಂದೇಶದಲ್ಲಿ, “ಹೊಸ ವರ್ಷದ ಆಚರಣೆಗೆ ಸಂಬಂಧಿಸಿದಂತೆ ಚಶ್ಮಾ ದಾರುಲ್ ಇಫ್ತಾ ಬರೇಲಿ ಷರೀಫ್ ಫತ್ವಾ ಹೊರಡಿಸಿದ್ದಾರೆ. ಜನವರಿಯಲ್ಲಿ ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷದ ಸಂಭ್ರಮಾಚರಣೆ ಮುಸ್ಲಿಮರಿಗೆ ಅನುಚಿತವಾಗಿದೆ ಎಂದು ಫತ್ವಾ ಹೇಳುತ್ತದೆ. ಅನೇಕ ಮುಸ್ಲಿಂ ಹುಡುಗರು ಮತ್ತು ಹುಡುಗಿಯರು ಹೊಸ ವರ್ಷವನ್ನು ಆಚರಿಸುತ್ತಾರೆ ಮತ್ತು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಹೊಸ ವರ್ಷ ಕ್ರಿಶ್ಚಿಯನ್ ಕ್ಯಾಲೆಂಡರ್ ಆರಂಭ ಅಥವಾ ಇಂಗ್ಲೀಷರ ವರ್ಷವಾಗಿದೆ ಎಂದು ಪ್ರತಿಪಾದಿಸಿರುವ ರಜ್ವಿ ಬರೇಲ್ವಿ, ಅಂತಹ ಧಾರ್ಮಿಕೇತರ ಆಚರಣೆಗಳನ್ನು ಮುಸ್ಲಿಮರಿಗೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ. ಮುಸ್ಲಿಂ ಯುವಕ-ಯುವತಿಯರು ಹೊಸ ವರ್ಷದ ಆಚರಣೆಗಳಲ್ಲಿ ಪಾಲ್ಗೊಳ್ಳುವ ಬದಲಿಗೆ ತಮ್ಮ ನಂಬಿಕೆಗೆ ಹೊಂದಿಕೆಯಾಗುವ ಧಾರ್ಮಿಕ ಆಚರಣೆಗಳತ್ತ ಗಮನ ಹರಿಸಬೇಕು ಎಂದು ನಿರ್ದೇಶಿಸಿದ್ದಾರೆ.