ಕಾಸರಗೋಡು : ಕಾಸರಗೋಡಿನ ಪೆರಿಯ ಸೆಂಟ್ರಲ್ ಯೂನಿವರ್ಸಿಟಿ ಉಪ ಕುಲಪತಿಗಳಾಗಿ ಕನ್ನಡಿಗ, ಕರ್ನಾಟಕದ ಧಾರವಾಡ ನಿವಾಸಿ ಪ್ರೊ. ಸಿದ್ದು ಪಿ. ಆಲಗೂರು ಸ್ಥಾನಾರೋಹಣಗೈದರು. ಕರ್ನಾಟಕದ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ರಿಜಿಸ್ಠ್ರಾರ್, ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ಪವಿದ್ಯಾಲಯದ ಉಪಕುಲಪತಿ ಮುಂತಾದ ಹುದ್ದೆಯನ್ನು ನಿರ್ವಹಿಸಿದ ಅನುಭವಗಳೊಂದಿಗೆ ಇವರು ಕಾಸರಗೋಡಿಗೆ ಆಗಮಿಸಿದ್ದಾರೆ. ಶೈಕ್ಷಣಿಕ ರಂಗದ ಉನ್ನತ ಹುದ್ದೆಗಳ ನಿರ್ವಹಣೆಯಲ್ಲಿ 38 ವರ್ಷಗಳ ಅನುಭವ ಉಳ್ಳ ಅವರು ಇಂಜಿನಿಯರಿಂಗ್ ತಜ್ಞ, ಭಾಷಾ ಪ್ರೇಮಿ.
ಕಾಸರಗೋಡಿನಲ್ಲಿರುವ ಕೇರಳ ಕೇಂದ್ರ ವಿಶ್ವವಿದ್ಯಾಲಯವನ್ನು ದೇಶದ ಇತರ ಪ್ರಮುಖ ವಿ.ವಿ.ಗಳ ಮಟ್ಟಕ್ಕೇರಿಸುವಲ್ಲಿ ವಿಶ್ವವಿದ್ಯಾಲಯದ ಭೌತಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ವಿಶೇಷ ಗಮನ ಹರಿಸಲಾಗುವುದೆಂದು ಕಾಸರಗೋಡಿಗೆ ಬಂದು ಸೆಂಟ್ರಲ್ ಯೂನಿವರ್ಸಿಟಿ ಉಪಕುಲಪತಿಗಳ ಜವಾಬ್ದಾರಿ ಸ್ವೀಕರಿಸಿ, ಪದಗ್ರಹಣಗೈದ ಪ್ರೊ.ಸಿದ್ದು ಪಿ.ಆಲ್ಗೂರ್ ಹೇಳಿದರು. ಪೆರಿಯದಲ್ಲಿರುವ ವಿಶ್ವವಿದ್ಯಾಲಯಕ್ಕೆ ಸಾಂಪ್ರದಾಯಿಕ ಕ್ರಮಗಳೊಂದಿಗೆ ಆಗಮಿಸಿ, ಬಳಿಕ ವಿ.ವಿ. ಪ್ರವೇಶಿಸುವ ಬಾಗಿಲಿಗೆ ನಮಸ್ಕರಿಸಿ ಒಳಬಂದು ಪದಗ್ರಹಣ ಸಮಾರಂಭ ನಡೆದ ಬಳಿಕ ಮಾಧ್ಯಮಗಳೊಂದಿಗೆ ಅವರು ಹೀಗೆಂದರು.
ವಿಶ್ವವಿದ್ಯಾಲಯವೂ ಕಾಲಕ್ಕನುಸಾರ ಶೈಕ್ಷಣಿಕ ಪರಿಷ್ಕರಣೆ ಹೊಂದಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹೊಸ ಪೀಳಿಗೆಯನ್ನು ಆಕರ್ಷಿಸಲು ಪೂರಕವಾದ ಆಧುನಿಕ ಶಿಕ್ಷಣದ ಕೋರ್ಸುಗಳ ಅಗತ್ಯವಿದೆ. ನಾವು ಎಐ ತಂತ್ರಜ್ಞಾನದ ಕಾಲದಲ್ಲಿದ್ದೇವೆ. ಆದ್ದರಿಂದಲೇ ಹೊಸ ತಲೆಮಾರು ಬಯಸುವ ವೃತ್ತಿಪರ ಕೋರ್ಸುಗಳು ಅಗತ್ಯವಾಗಿದೆ. ಸಿಲೆಬಸ್ ಕೂಡಾ ಕಾಲಕ್ಕನುಸಾರ ಪರಿಷ್ಕೃತವಾಗಬೇಕಿದೆ. ಜತೆಗೆ ಆಧುನಿಕ ಕಾಲಘಟ್ಟದ ಮಟ್ಟಕ್ಕೆ ವಿಶ್ವವಿದ್ಯಾಲಯವೂ ಮೇಲ್ದರ್ಜೆಗೆ ಏರಬೇಕಾಗಿದೆ. ಇತರ ವಿ.ವಿ ಗಳ ಜತೆ ಬಾಂಧವ್ಯ ಬೆಳೆಸಬೇಕಾಗಿದೆ ಎಂದವರು ನುಡಿದರು.
ಪ್ರಸ್ತುತ ವಿಶ್ವವಿದ್ಯಾಲಯಕ್ಕೆ ಎ ಗ್ರೇಡ್ ಇದೆ. ಇದನ್ನು ಎ ಪ್ಲಸ್ ಗ್ರೇಡ್ ಎಂಬ ಮೇಲ್ದರ್ಜೆಗೇರಿಸಬೇಕು. ಕೇರಳದ ಪ್ರಮುಖ ವಿ.ವಿ.ಗಳ ಸಾಲಿನಲ್ಲಿ ಗುರುತಿಸಲ್ಪಟ್ಟು, ನಾಡಿಗೆ ಪೂರಕವಾಗಿ ಇದು ಕಾರ್ಯಾಚರಿಸಬೇಕು. ಕಾಸರಗೋಡಿನ ಭಾಷಾ ವೈವಿಧ್ಯ, ಸಾಂಸ್ಕೃತಿಕ ಹಿನ್ನೆಲೆಯೊಃದಿಗೆ ಇಲ್ಲಿನ ವಿ.ವಿ.ಗೆ ಬಂದಿದ್ದೇನೆ. ಇದು ನನ್ನದೇ ಆಯ್ಕೆ ಎಂದರು.
ನಾನೊಬ್ಬ ಭಾಷಾ ಪ್ರೇಮಿ. ಕಾಸರಗೋಡಿನ ಬಹುಭಾಷಾ ಸಂಸ್ಕೃತಿಗಳ ಬಗ್ಗೆ ತಿಳಿದೇ ಬಂದಿದ್ದೇನೆ. ಹಿಂದೆ 2006ರಲ್ಲಿ ಈ ಭಾಗಕ್ಕೆ ಪ್ರವಾಸ ಬಂದಿದ್ದೆ. ಈಗ ಕೇರಳ ವಿ.ವಿ.ಕುಲಪತಿಯಾಗಿ ನನ್ನದೇ ಆಯ್ಕೆಯಂತೆ ಬಂದಿದ್ದೇನೆ. ಕೇರಳ ಕೇಂದ್ರೀಯ ವಿ.ವಿ.ಚಟುವಟಿಕೆ ವಿಸ್ತರಿಸಿ, ಅದರ ಅಭ್ಯುದಯಕ್ಕೆ ನನ್ನ ಕೊಡುಗೆ ನೀಡಬೇಕೆಂಬುದೇ ಬಯಕೆ..
– ಪ್ರೊ ಸಿದ್ದು. ಪಿ. ಆಲಗೂರು
ಕೇರಳ ಕೇಂದ್ರೀಯ ವಿ.ವಿ.ಉಪಕುಲಪತಿ
ರಾಷ್ಟ್ರಪತಿ ದ್ರೌಪದಿ,ಮುರ್ಮು ಅವರು ಮಾ.18ರಂದು ಇವರನ್ನು ಕಾಸರಗೋಡಿಗೆ ನೇಮಿಸಿ ಆದೇಶ ಶ 2023 ಅಕ್ಟೋಬರ್ ತಿಂಗಳಿಂದ ಉಪಕುಲಪತಿ ಹುದ್ದೆ ಖಾಲಿಯಾಗಿತ್ತು.