ಬೆಳಗಾವಿ :
ಅವಕಾಶ ವಂಚಿತ ವಿದ್ಯಾರ್ಥಿಗಳಿಗಾಗಿಯೇ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿ ಅಶಕ್ತವಾಗಿದ್ದ ಕನ್ನಡವನ್ನು ಸಶಕ್ತಗೊಳಿಸಿ ಕನ್ನಡದ ದೀಪ ಹಚ್ಚಿದ ಕೆ.ಎಲ್.ಇ. ಸಂಸ್ಥಾಪಕರನ್ನು ನೆನೆಯುವುದೇ ಉದಯ, ಅವರ ಬದುಕು ಅಜರಾಮರವೆಂದು ಬೆಳಗಾವಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎ.ಎಂ.ಜಯಶ್ರೀ ಹೇಳಿದರು.
ಲಿಂಗರಾಜ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕೆಎಲ್ಇ 107 ನೇ ಸಂಸ್ಥಾಪನಾ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಂಸ್ಥೆಗೆ ಅಡಿಪಾಯ ಹಾಕಿದ ಸಪ್ತರ್ಷಿಗಳ ಸಂಕಲ್ಪ ಹಾಗೂ ಸದಾಶಯ ಬಹುದೊಡ್ಡ ಶಕ್ತಿಯಾಗಿತ್ತು. ಆ ಮಹನೀಯರು ಮಾಡಿದ ತ್ಯಾಗ, ಪಟ್ಟ ಪರಿಶ್ರಮಗಳು ಅಷ್ಟಿಷ್ಟಲ್ಲ. ಸಮುದಾಯದ ಹಿತಕ್ಕೆ ದುಡಿದ ಕೆ.ಎಲ್.ಇ. ಸಂಸ್ಥಾಪಕರು ವ್ಯಷ್ಟಿಕಲ್ಯಾಣವನ್ನು ಬದಿಗಿರಿಸಿದರು. ಅಂತೆಯೆ ಅದಕ್ಕೆ ಇಂದಿಗೂ ಕುಂದು ಬಂದಿಲ್ಲ. ನಮ್ಮ ನಾಡಿನ ಹೆಮ್ಮೆ ಹೆಚ್ಚಿಸುವ ನಿಟ್ಟಿನಲ್ಲಿ ಕೆಎಲ್ಇ ಸಂಸ್ಥೆಯ ಕೊಡುಗೆ ಚಿರಸ್ಮರಣೀಯ. ಕನಸು ಆದರ್ಶಗಳನ್ನು ಕಟ್ಟಿಕೊಂಡ ಏಳು ಜನ ಯುವ ಶಿಕ್ಷಕರು ಅಂದು ಕಟ್ಟಿದ ಕೆ.ಎಲ್.ಇ. ಸಂಸ್ಥೆಗೆ ಇಂದು ಜಾಗತಿಕ ಮುನ್ನಣೆ. ಶಿಕ್ಷಣರಂಗದ ಜೀವನಾಡಿ ಎಂಬ ಶ್ರೇಯಸ್ಸು ಬಂದಿದೆ ಎಂದು ತಿಳಿಸಿದರು.
ಶಿಕ್ಷಣದ ಬಗೆಗಿನ ಮಹತ್ವ ಅರಿಯದ ಅಶಿಕ್ಷಿತ ಸಮಾಜವೊಂದರ ಹೀನಾಯ ಸ್ಥಿತಿಗೆ ಮರುಗಿದ ಸಂಸ್ಥಾಪಕರು ಸಮಾಜ ಸುಶಿಕ್ಷಿತಗೊಂಡರೆ ಮಾತ್ರ ಬದಲಾವಣೆ ಹಾಗೂ ಪ್ರಗತಿ ಸಾಧ್ಯ ಎಂಬುದನ್ನು ಅರಿತಿದ್ದರು. ಅಂತೆಯೇ ಅವರು ಬ್ರಿಟಿಷ ಆಡಳಿತದಲ್ಲಿ ಹೆಚ್ಚಿನ ವೇತನದ ಉನ್ನತ ಹುದ್ದೆಗಳೂ ಸಹಜವಾಗಿ ದೊರೆಯುತ್ತಿದ್ದಾಗಲೂ ಅವುಗಳನ್ನು ಧಿಕ್ಕರಿಸಿ ಕಡಿಮೆ ವೇತನದಲ್ಲಿಯೇ ‘ಮಾಸ್ತರಕಿ’ ಮಾಡಿ ಉತ್ತರ ಕರ್ನಾಟಕದ ಇತಿಹಾಸವನ್ನು ಬದಲಿಸಲು ಅಹರ್ನಿಶಿ ಶ್ರಮಿಸಿದರು, ನಾಡುನುಡಿಗಳನ್ನು ಉಳಿಸಿದರು ಬೆಳೆಸಿದರು. ಮುಂಬಯಿ ಸರಕಾರದಲ್ಲಿ ಶಿಕ್ಷಣ ಮಂತ್ರಿಗಳಾಗಿದ್ದ ಸರ್ ಸಿದ್ದಪ್ಪ ಕಂಬಳಿಯವರ ಚಾಣಾಕ್ಷತನ ಹಾಗೂ ದೂರದೃಷ್ಟಿಯ ಫಲವಾಗಿ 1932 ರ ಅಂತ್ಯಕ್ಕೆ ಲಿಂಗರಾಜ ಕಾಲೇಜ ಪ್ರಾರಂಭಿಸಲು ಮುಂಬಯಿ ವಿಶ್ವವಿದ್ಯಾಲಯ ಹಾಗೂ ಸರಕಾರ ಅನುಮತಿ ನೀಡಿದವು. 1933 ರಲ್ಲಿ ಕಾಲೇಜು ಪ್ರಾರಂಭವಾಯಿತು. ಮಾತ್ರವಲ್ಲದೇ ಕಾಲ ಕಾಲಕ್ಕೆ ಹಲವಾರು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಅಕ್ಷರ ದಾಸೋಹವನ್ನು ವಿಸ್ತರಿಸಿದರು.
ಈ ಸಪ್ತರ್ಷಿಗಳು ದೊಡ್ಡವರು ಅವರದು ದೊಡ್ಡ ಹಾದಿ. ಅಂತೆಯೆ ವಿಭಿನ್ನ ಹಾಗೂ ಅನನ್ಯ ಚಿಂತನೆಗೈದು ಶಿಕ್ಷಣ ವಂಚಿತರಿಗೆ ತಮ್ಮ ಸರ್ವಸ್ವವನ್ನು ಮೀಸಲಿಟ್ಟು ಶ್ರದ್ಧೆಯಿಂದ ದುಡಿದರು. ಅವರು ನೆಟ್ಟ ಸಸಿ, ಗಟ್ಟಿಯಾಗಿ ಬೇರುಬಿಟ್ಟು ಹೆಮ್ಮರವಾಗಿ ಬೆಳೆದು ನಿಂತಿದೆ. ಕರ್ನಾಟಕದ ಶಿಕ್ಷಣಲೋಕದ ಅಂತರ್ಜಲವನ್ನು ಸಂಪನ್ನಗೊಳಿಸುತ್ತಿರುವ ಸಂಸ್ಥೆ ಸಾಮಾಜಿಕ ನ್ಯಾಯ ಒದಗಿಸುತ್ತ ಬದ್ಧತೆಯನ್ನು ಕಾಯ್ದುಕೊಂಡಿದೆ. ನಾಡಿಗೆ ನಾಡೇ ತಲೆದೂಗುವಂತಹ ಸಾಧನೆಯನ್ನು ದಾಖಲಿಸಿದೆ. ಅದೆಲ್ಲಕ್ಕೂ ಕಳಸವಿಟ್ಟಂತೆ 1984 ರಲ್ಲಿ ಕೆಎಲ್ಇ ಸಂಸ್ಥೆಯ ಚುಕ್ಕಾಣಿಯನ್ನು ಹಿಡಿತ ಡಾ.ಪ್ರಭಾಕರ ಕೋರೆಯವರು ಸಂಸ್ಥೆಯನ್ನು ಅಗಾಧವಾಗಿ ಬೆಳೆಸಿದ್ದಾರೆ. ಶಿಕ್ಷಣ ಆರೋಗ್ಯ ಕ್ಷೇತ್ರದಲ್ಲಿ ಅದ್ವಿತೀಯವಾದ ಸಾಧನೆಯನ್ನು ಮಾಡಿದೆ. ಇಂದು 293 ಕ್ಕೂ ಹೆಚ್ಚು ಅಂಗಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. 18 ಸಾವಿರ ಸಿಬ್ಬಂದಿ ಸೇವಾ ಮನೋಭಾವನೆಯಿಂದ ದುಡಿಯುತ್ತಿದ್ದಾರೆ. 1.38 ಲಕ್ಷ ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತ್ತಿದ್ದಾರೆ. ಇಲ್ಲಿ ಅಧ್ಯಾಯನ ಮಾಡುವುದೇ ಒಂದು ಸೌಭಾಗ್ಯವೆಂದು ತಿಳಿಯಬೇಕು. ಒಂದು ಮಹಾಸಾಗರವನ್ನು ವರ್ಣಿಸುವುದು, ಅದರ ಆಳಗಲವನ್ನು ಅರಿಯುವುದು ಎಷ್ಟು ದುಸ್ತರವೋ ಕೆಎಲ್ಇ ಸಂಸ್ಥೆಯ ಮಹನೀಯರ ಬದುಕಿನ ಯಶೋಗಾಥೆಯೂ ಅಷ್ಟೇ ಅದ್ಭುತವೆಂದು ಹೇಳಿದರು.
ಆರಂಭದಲ್ಲಿ ಕೆಎಲ್ಇ ಸಂಸ್ಥಾಪಕ ಸಪ್ತರ್ಷಿಗಳ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಲಾಯಿತು.
ಲಿಂಗರಾಜ ಕಾಲೇಜು ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ ಸ್ವಾಗತಿಸಿದರು. ಆರ್.ಎಲ್.ಎಸ್.ಕಾಲೇಜಿನ ಪ್ರಾಚಾರ್ಯ ಡಾ.ಜ್ಯೋತಿ ಕವಳೆಕರ ವಂದಿಸಿದರು. ಪ್ರೊ.ಸಿದ್ದನಗೌಡ ಪಾಟೀಲ ನಿರೂಪಿಸಿದರು. ವೈಷ್ಣವಿ ಯಲಿಗಾರ ಪ್ರಾರ್ಥಿಸಿದರು. ಕೆಎಲ್ಇ ಜಂಟಿ ಕಾರ್ಯದರ್ಶಿ ಡಾ.ಪ್ರಕಾಶ ಕಡಕೋಳ, ಆಜೀವ ಸದಸ್ಯರಾದ ಡಾ.ಎಂ.ಪಿ.ಸತೀಶ, ಪ್ರೊ. ಶೀತಲ ನಂಜಪ್ಪನವರ, ಬಿ.ವ್ಹಿ.ಬೆಲ್ಲದ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಜಯಸಿಂಹ, ಬಿ.ಎಡ್.ಕಾಲೇಜಿನ ಪ್ರಾಚಾರ್ಯ ಪ್ರೊ.ವಸಂತ ಕುರಿ ಹಾಗೂ ವಿವಿಧ ಶಾಲಾ ಕಾಲೇಜುಗಳ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.