ದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿ ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಮಂಗಳವಾರ ಭೇಟಿಯಾದರು. ಅವರ ಭೇಟಿಯು 2026 ರ ತಮಿಳುನಾಡು ಚುನಾವಣೆಗೆ ಮುನ್ನ ಬಿಜೆಪಿ ಎಐಎಡಿಎಂಕೆ ಜೊತೆ ಮತ್ತೆ ಒಂದಾಗುವ ಊಹಾಪೋಹಗಳಿಗೆ ನಾಂದಿ ಹಾಡಿದೆ.
ಇಪಿಎಸ್ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿದ್ದು, 2026 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ-ಎಐಎಡಿಎಂಕೆ ಮೈತ್ರಿ ಊಹಾಪೋಹಗಳಿಗೆ ಕಾರಣವಾಗಿದೆ
ಎಐಎಡಿಎಂಕೆ ಹಿರಿಯ ನಾಯಕರಾದ ಎಸ್ಪಿ ವೇಲುಮಣಿ, ಕೆಪಿ ಮುನುಸ್ವಾಮಿ ಕೂಡ ದೆಹಲಿಯಲ್ಲಿದ್ದಾರೆ. 2026 ರಲ್ಲಿ ತಮಿಳುನಾಡು ರಾಜ್ಯ ಚುನಾವಣೆಗೆ ಮುನ್ನ ಬಿಜೆಪಿ ಮತ್ತು ಎಐಎಡಿಎಂಕೆ ನಡುವಿನ ಸಂಬಂಧಗಳ ಪುನರುಜ್ಜೀವನದ ಬಗ್ಗೆ ಸೂಚನೆ ಇದಾಗಿದೆ.
ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇದ್ದು, ಲೋಕಸಭೆ ಕ್ಷೇತ್ರಗಳ ಮರು ವಿಂಗಡಣೆ ಮತ್ತು ದ್ವಿಭಾಷಾ ನೀತಿಯಂತಹ ವಿವಾದಾತ್ಮಕ, ಭಾವನಾತ್ಮಕ ವಿಷಯಗಳನ್ನಿಟ್ಟುಕೊಂಡು ಡಿಎಂಕೆ ಹೋರಾಟ ನಡೆಸಲು ಪ್ರಜ್ಞಾಪೂರ್ವಕ ಪ್ರಯತ್ನ ಮಾಡುತ್ತಿರುವಾಗಲೇ ಪಳನಿಸ್ವಾಮಿ ಅವರು ಶಾ ಅವರನ್ನು ಭೇಟಿ ಮಾಡಿರುವುದು ತಮಿಳುನಾಡಿನಲ್ಲಿ ರಾಜಕೀಯ ಸಂಚಲನ ಮೂಡಿಸಿದೆ.
2019 ರಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿದ್ದ ಎಐಎಡಿಎಂಕೆ, ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಕೆ. ಅಣ್ಣಾಮಲೈ ಅವರನ್ನು ದೂಷಿಸಿ, 2023 ರ ಸೆಪ್ಟೆಂಬರ್ನಲ್ಲಿ ಎನ್ಡಿಎನಿಂದ ಹೊರ ನಡೆದಿತ್ತು.
ಎಐಎಡಿಎಂಕೆ ಜೊತೆಗಿನ ಮೈತ್ರಿಯನ್ನು ವಿರೋಧಿಸಿದ್ದ ಅಣ್ಣಾಮಲೈ, ಈಗ ಡಿಎಂಕೆಗೆ ಪ್ರಬಲ ವಿರೋಧ ಒಡ್ಡುವ ಅಗತ್ಯದ ಬಗ್ಗೆಯೂ ಪಕ್ಷದ ಹೈಕಮಾಂಡ್ಗೆ ಮನವರಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಅಮಿತ್ ಶಾ ಅವರ ಭೇಟಿಯ ಮುಖ್ಯ ಉದ್ದೇಶ ಡಿಎಂಕೆ ಸರ್ಕಾರದ ವಿರುದ್ಧ ದೂರುಗಳನ್ನು ನೀಡುವುದಾಗಿತ್ತು. ಆದರೆ, ರಾಜ್ಯ ರಾಜಕಾರಣದ ಬೆಳವಣಿಗೆಗಳ ಬಗ್ಗೆಯೂ ಪ್ರಮುಖವಾಗಿ ಚರ್ಚೆಯಾಗಿವೆ’ ಎಂದು ಮೂಲಗಳು ತಿಳಿಸಿವೆ.
‘ತಮಿಳುನಾಡಿನಲ್ಲಿ ಅಣ್ಣಾಮಲೈ ನಾಯಕತ್ವದಲ್ಲೇ ಪಕ್ಷ ಸಂಘಟನೆಯಾಗಲಿದೆ. ಅಗತ್ಯವಿದ್ದರೆ, ಎಐಎಡಿಎಂಕೆ ಜತೆಗೆ ವ್ಯವಹರಿಸಲು ಚುನಾವಣೆ ವೇಳೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುತ್ತದೆ’ ಎನ್ನಲಾಗಿದೆ.