ನವದೆಹಲಿ: ಸೈನಿಕರ ನೇಮಕಕ್ಕಾಗಿ ಜಾರಿಗೆ ತರಲಾಗಿರುವ ‘ಅಗ್ನಿಪಥ’ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್, ಈ ವ್ಯವಸ್ಥೆಯಿಂದ ಯುವಕರಿಗೆ ‘ಘೋರ ಅನ್ಯಾಯ’ ಆಗಿದೆ ಎಂದು ಆರೋಪಿಸಿದೆ.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ‘ಅಗ್ನಿಪಥ’ ಯೋಜನೆ ರದ್ದುಗೊಳಿಸಿ ಹಳೆಯ ನೇಮಕಾತಿ ವ್ಯವಸ್ಥೆಯನ್ನು ಮರುಸ್ಥಾಪಿಸುವುದಾಗಿಯೂ ಸೋಮವಾರ ಘೋಷಿಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಸಂಬಂಧ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದು, ಹಳೆಯ ನೇಮಕಾತಿ ವ್ಯವಸ್ಥೆಯಡಿ ಸೇನೆಗೆ ಸೇರಲು ಬಯಸಿದ್ದ ಲಕ್ಷಾಂತರ ಯುವಕರಿಗೆ ‘ಅಗ್ನಿಪಥ’ ಯೋಜನೆಯಿಂದ ಅನ್ಯಾಯ ಆಗಿದೆ. ಅವರಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.
‘2019 ರಿಂದ 2022ರ ವರೆಗಿನ ಅವಧಿಯಲ್ಲಿ ಸುಮಾರು ಎರಡು ಲಕ್ಷ ಯುವಕ–ಯುವತಿಯರು ಕಠಿಣ ದೈಹಿಕ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸೇನೆಗೆ ಸೇರಲು ಅರ್ಹತೆ ಗಳಿಸಿದ್ದರು. ತಮ್ಮ ಕನಸು ಕೊನೆಗೂ ಈಡೇರಿದೆ ಎಂದು ನಂಬಿದ್ದ ಅವರು ನೇಮಕಾತಿ ಪತ್ರಕ್ಕಾಗಿ ಕಾಯುತ್ತಿದ್ದರು. ಆದರೆ 2022ರ ಮೇ 31 ರಂದು ಕೇಂದ್ರ ಸರ್ಕಾರವು ‘ಅಗ್ನಿಪಥ’ ಯೋಜನೆಯನ್ನು ಘೋಷಿಸುವುದರೊಂದಿಗೆ ಅವರ ಕನಸು ನುಚ್ಚುನೂರಾದವು’ ಎಂದು ಪತ್ರದಲ್ಲಿ ಬರೆದಿದ್ದಾರೆ.
‘ನಮ್ಮ ಯುವಕರು ಈ ರೀತಿ ಸಂಕಟ ಅನುಭವಿಸಲು ಬಿಡುವುದಿಲ್ಲ. ನ್ಯಾಯ ದೊರಕಿಸಿಕೊಂಡುವಂತೆ ನಿಮ್ಮಲ್ಲಿ ಮನವಿ ಮಾಡುತ್ತೇನೆ’ ಎಂದು ಕೋರಿದ್ದಾರೆ.
‘ಅಗ್ನಿಪಥ’ ಹಲವು ಲೋಪಗಳಿಂದ ಕೂಡಿದೆ ಎಂದಿರುವ ಖರ್ಗೆ, ‘ಈ ಯೋಜನೆ ಬಗ್ಗೆ ಸೇನೆಯು ಅಚ್ಚರಿ ವ್ಯಕ್ತಪಡಿಸಿತ್ತು. ನೌಕಾಪಡೆ ಮತ್ತು ವಾಯುಪಡೆಗೆ ಅದು ಅತ್ಯಂತ ಅನಿರೀಕ್ಷಿವಾಗಿತ್ತು ಎನ್ನುವುದನ್ನು ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ.ನರವಣೆ ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ’ ಎಂಬ ಅಂಶವನ್ನೂ ಉಲ್ಲೇಖಿಸಿದ್ದಾರೆ.
‘ಅಷ್ಟೇ ಅಲ್ಲದೆ, ಈ ಯೋಜನೆಯು ವೇತನ ಮತ್ತು ಸೌಲಭ್ಯಗಳ ವಿಚಾರದಲ್ಲಿ ಜವಾನರ ನಡುವೆ ತಾರತಮ್ಯಕ್ಕೆ ಕಾರಣವಾಗಿದೆ. ಸೇನೆಯಲ್ಲಿ ಒಂದೇ ರೀತಿಯ ಜವಾಬ್ದಾರಿ ನಿರ್ವಹಿಸುವವರಿಗೂ ಭಿನ್ನ ರೀತಿಯ ವೇತನ, ಸೌಲಭ್ಯಗಳು ದೊರೆಯುತ್ತದೆ. ನಾಲ್ಕು ವರ್ಷಗಳ ಕರ್ತವ್ಯ ಪೂರೈಸಿ ಸೇನೆಯಿಂದ ಹೊರಬಂದ ಬಳಿಕ ಅವರು ಹೊಸ ಉದ್ಯೋಗ ಕಂಡುಕೊಳ್ಳಲು ಪರದಾಡಬೇಕಾಗುತ್ತದೆ’ ಎಂದು ವಿವರಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಖರ್ಗೆ ಬರೆದಿರುವ ಪತ್ರವನ್ನು ‘ಎಕ್ಸ್’ ಖಾತೆಯಲ್ಲಿ ಟ್ಯಾಗ್ ಮಾಡಿದ್ದು, ‘ಅಗ್ನಿಪಥ’ ಯೋಜನೆಯಿಂದ ಲಕ್ಷಾಂತರ ಯುವಕರಿಗೆ ಅನ್ಯಾಯ ಆಗಿದೆ ಎಂದು ದೂರಿದ್ದಾರೆ.
ಬಿಜೆಪಿ ಸರ್ಕಾರವು ಅಗ್ನಿವೀರ ಯೋಜನೆ ಜಾರಿಗೆ ತಂದು ದೇಶದ ಲಕ್ಷಾಂತರ ಯುವಕರ ಕನಸನ್ನು ನುಚ್ಚುನೂರು ಮಾಡಿದೆ
ಪ್ರಿಯಾಂಕಾ ಗಾಂಧಿ ಎಐಸಿಸಿ ಪ್ರಧಾನ ಕಾರ್ಯದರ್ಶಿ
ಸೇನೆಗೆ ಸೇರಲು ಬಯಸುವ ಆಕಾಂಕ್ಷಿಗಳು ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ನಾವು ಸಾಥ್ ನೀಡುತ್ತೇವೆ
ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ
ಅಗ್ನಿಪಥ ಯೋಜನೆಯಿಂದ ದೇಶದ ಯುವಕರಿಗೆ ಅನ್ಯಾಯ: ರಾಷ್ಟ್ರಪತಿಗೆ ಖರ್ಗೆ ಪತ್ರ