ಬೆಳಗಾವಿ : ತಾಲೂಕು ಕೇಂದ್ರ ಸ್ಥಾನದಿಂದ ಮರೀಚಿಕೆಯಾಗಿರುವ ಹಾಗೂ ಜಿಲ್ಲೆಯಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಸಂಕೇಶ್ವರ ಪಟ್ಟಣವನ್ನು ತಾಲೂಕು ಮಾಡುವಂತೆ ಕೂಗು ಹೆಚ್ಚಾಗುತ್ತಿದ್ದು, ನೂತನ ಸಂಕೇಶ್ವರ ತಾಲೂಕು ರಚನೆ ಮತ್ತು ಭವಿಷ್ಯದಲ್ಲಿ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿದರೆ ಹುಕ್ಕೇರಿ, ಸಂಕೇಶ್ವರ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗಗಳು ಬೆಳಗಾವಿ ಜಿಲ್ಲೆಯಲ್ಲಿ ಉಳಿಸಿಕೊಳ್ಳುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ರವಾನಿಸಲಾಯಿತು.
ಈ ಬಗ್ಗೆ ಇತ್ತಿಚೆಗೆ ದಿ. ಸಂಕೇಶ್ವರ ವೆಲ್ ಫರ್ ಅಸೋಶಿಯೇಶನ್ ಪದಾಧಿಕಾರಿಗಳು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿದ್ದಾರೆ. ಜಿಲ್ಲೆಯ ಬೆಳಗಾವಿ ಉಪ ವಿಭಾಗದ ಹುಕ್ಕೇರಿ ತಾಲೂಕಿನಲ್ಲಿರುವ ಸಂಕೇಶ್ವರ ತಾಲೂಕು ಕೇಂದ್ರವಾದ ಹುಕ್ಕೇರಿಗಿಂತಲೂ ದೊಡ್ಡದು ಪಟ್ಟಣ ಮತ್ತು ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಇಲ್ಲಿಯ ಉಪ ತಹಶೀಲ್ದಾರ ಕ್ಷೇತ್ರದಲ್ಲಿ ಬರುವ ಕಣಗಲಾ ಹಾಗೂ ಹೆಬ್ಬಾಳ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿರುವ ಹಳ್ಳಿಗಳಿಗೆ ಹಾಗೂ ಹುಕ್ಕೇರಿ ತಾಲೂಕಿನ ಪಶ್ಚಿಮ ಭಾಗದ ಮಹಾರಾಷ್ಟ್ರ ಗಡಿಯಲ್ಲಿರುವ ದಡ್ಡಿ ಹಾಗೂ ಹತ್ತರಗಿ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಹಳ್ಳಿಗಳಿಗೆ ಹುಕ್ಕೇರಿ ತಾಲೂಕು ಕೇಂದ್ರವು ತುಂಬಾ ದೂರವಾಗಿದೆ.
ಒಂದು ವೇಳೆ ಸಂಕೇಶ್ವರ ತಾಲ್ಲೂಕು ಕೇಂದ್ರವಾದರೆ ಅಲ್ಲಿನ ಜನರಿಗೆ ಹೋಗಿ ಬರಲು ತುಂಬಾ ಅನಾನುಕೂಲ ಆಗುತ್ತದೆ, ಈ ಎಲ್ಲ ಹಳ್ಳಿಗಳಿಗೆ ಸಂಕೇಶ್ವರ ಪಟ್ಟಣವು ಸೂಕ್ತ ಹಾಗೂ ಸಂಚಾರ ಅನುಕೂಲವಾಗಿರುತ್ತದೆ. ಅದರಂತೆಯೇ ಹಲವಾರು ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳು ಸಂಕೇಶ್ವರ ನಗರದಲ್ಲಿ ಲಭ್ಯವಿರುತ್ತವೆ. ಹಾಗಾಗಿ ಈ ಭಾಗದ ಜನರ ಬೇಡಿಕೆಗಳನ್ನು ಪೂರೈಸಲು ಸಂಕೇಶ್ವರ ನಗರವನ್ನು ತಾಲೂಕ ಕೇಂದ್ರವನ್ನಾಗಿ ಪರಿಗಣಿಸಬೇಕು ಹಾಗೂ ಗಡಿ ಭಾಗದ ಜನರ ಕುಂದು ಕೊರತೆಗಳನ್ನು ಪರಿಹರಿಸಿ ಅವರ ಅವಶ್ಯಕತೆಗಳನ್ನು ಈಡೇರಿಸಬೇಕು.
ಹಾಗೆಯೇ ಭವಿಷ್ಯದಲ್ಲಿಯ ಬೆಳಗಾವಿ ಜಿಲ್ಲೆಯ ವಿಭಜನೆಗೆ ನಮ್ಮದು ಯಾವುದೇ ತಕರಾರು ಇರುವುದಿಲ್ಲ, ಹುಕ್ಕೇರಿ ತಾಲೂಕಿನ ಭೌಗೋಳಿಕ ಹಾಗೂ ಸಾಮಾಜಿಕ ಸಮರಸ್ಯವು ಬೆಳಗಾವಿ ನಗರಕ್ಕೆ ಅನುಕೂಲ ಇದೆ, ಹಾಗಾಗಿ ಈ ತಾಲೂಕನ್ನು ಬೆಳಗಾವಿ ಜಿಲ್ಲೆಯಲ್ಲಿ ಇರಿಸುವುದು ಯೋಗ್ಯವಾಗಿದೆ.
ಏಕೆಂದರೆ, ಬೆಳಗಾವಿ ಜಿಲ್ಲೆಯ ವಿಭಜನೆಯಾದ ನಂತರ ಹುಕ್ಕೇರಿ ತಾಲೂಕನ್ನು ಬೆಳಗಾವಿ ಜಿಲ್ಲೆಯಲ್ಲಿಯೇ ಯಥಾ ಸ್ಥಿತಿಯರಿಸಬೇಕು ಎಂದು ಸಂಕೇಶ್ವರ ಪುರಸಭೆಯಲ್ಲಿ ಕಳೆದ 5 ವರ್ಷಗಳ ಹಿಂದೆ ಸರ್ವಾನುಮತದಿಂದ ಠರಾವು ಪಾಸು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಸಲ್ಲಿಸಲಾದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ರಾಮಾಚಾರ್ ದೇಶಪಾಂಡೆ, ಶ್ರೀ ಕಮತಗಿ, ಸುಭಾಷ್ ಜಾಧವ್, ಸಿದ್ಧಾರ್ಥ ಮಿರಾಜಿ, ಮನೀಶಾ ಜಾಧವ, ಮಾಲೋನ್ ಸತಾಶೇಜ್, ಸಂಪದಾ ಕೇಲುಸ್ಕರ್, ಆಂಟನ್ ರಾಡ್ರಿಕ್ಸ್, ಶ್ರೇಯಸ್ ಶಾ ಉಪಸ್ಥಿತರಿದ್ದರು.


