ಅಮರಾವತಿ: ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ‘ತನ್ನ ಕುಟುಂಬಕ್ಕೆ ಅವಮಾನ ಮಾಡಲಾಗಿದೆ’ ಎಂದು ಕಣ್ಣೀರು ಸುರಿಸಿ ವಿಧಾನಸಭೆಯಿಂದ ಹೊರಬಂದ 31 ತಿಂಗಳ ನಂತರ ಇಂದು, ಶುಕ್ರವಾರ (ಜೂನ್ 21) ಆಂಧ್ರಪ್ರದೇಶ ವಿಧಾನಸಭೆಗೆ ಮರಳಿದ್ದಾರೆ.
ಚಂದ್ರಬಾಬು ನಾಯ್ಡು ನವೆಂಬರ್ 2021 ರಲ್ಲಿ ತಾನು ಮುಖ್ಯಮಂತ್ರಿಯಾದ ನಂತರವೇ ವಿಧಾನಸಭೆಗೆ ಹಿಂತಿರುಗುವುದಾಗಿ ಪ್ರತಿಜ್ಞೆ ಮಾಡಿ ವಿಧಾಸಭೆಯಿಂದ ಹೊರನಡೆದಿದ್ದರು. ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅವರ ಪಕ್ಷವು ಪ್ರಚಂಡ ಗೆಲುವು ದಾಖಲಿಸಿದ ನಂತರ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲದಿನಗಳ ನಂತರ ಶುಕ್ರವಾರ ಜೂನ್ 21ರಂದು ಆಂಧ್ರದ ವಿಧಾನಸಭೆಗೆ ಪ್ರವೇಶಿಸಿದರು. ನಾಯ್ಡು ಮುಖ್ಯಮಂತ್ರಿಯಾಗಿ ವಿಧಾನಸಭೆಗೆ ಕಾಲಿಡುತ್ತಿದ್ದಂತೆ ಅವರಿಗೆ ಆತ್ಮೀಯ ಸ್ವಾಗತ ನೀಡಲು ಇಡೀ ಸದನ ಎದ್ದು ನಿಂತಿ ಗೌರವ ಸಲ್ಲಿಸಿತು. ಅವರು ನಾಲ್ಕನೇ ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. 175 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿಡಿಪಿ 135 ಸ್ಥಾನಗಳನ್ನು ಗೆದ್ದಿದೆ. ಮಿತ್ರಪಕ್ಷಗಳಾದ ಜನಸೇನಾ ಮತ್ತು ಬಿಜೆಪಿ ಕ್ರಮವಾಗಿ 21 ಮತ್ತು 8 ಸ್ಥಾನಗಳನ್ನು ಗೆದ್ದಿವೆ.
ನವೆಂಬರ್ 19, 2021 ರಂದು, ಆಗ ಅಧಿಕಾರದಲ್ಲಿದ್ದ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್ಆರ್ಸಿಪಿ) ಸದಸ್ಯರು ತಮ್ಮ ಪತ್ನಿಯ ಬಗ್ಗೆ ಮಾಡಿದ ನಿಂದನೀಯ ಕಾಮೆಂಟ್ಗಳ ಕುರಿತು ನೊಂದು ಅವರು ವಿಧಾನಸಭೆ ತೊರೆದಿದ್ದರು. ಮಹಿಳಾ ಸಬಲೀಕರಣದ ಕುರಿತು ನಡೆದ ಚರ್ಚೆಯಲ್ಲಿ ಕೈ ಜೋಡಿಸಿ ವಿಧಾನಸಭೆಯಿಂದ ಹೊರನಡೆಯುವ ಮುನ್ನ ಕಣ್ಣೀರು ಸುರಿಸಿದ್ದ ಚಂದ್ರಬಾಬು ನಾಯ್ಡು ,“ಇನ್ನು ಮುಂದೆ ನಾನು ಈ ಸಭೆಗೆ ಹಾಜರಾಗುವುದಿಲ್ಲ. ನಾನು ಮುಖ್ಯಮಂತ್ರಿಯಾದ ನಂತರವೇ ಸದನಕ್ಕೆ ಮರಳುತ್ತೇನೆ” ಎಂದು ಪ್ರತಿಜ್ಞೆ ಮಾಡಿದ್ದರು. ಮಹಾಭಾರತದಲ್ಲಿ ದ್ರೌಪದಿಯನ್ನು ಅವಮಾನಿಸಿದ ಸಭಾಂಗಣವನ್ನು ಉಲ್ಲೇಖಿಸಿ ಸಭೆ ‘ಕೌರವ ಸಭೆ’ಯಾಗಿದೆ ಎಂದು ಹೇಳಿ ಹೊರನಡೆದಿದ್ದರು.
2019 ರ ರಾಜ್ಯ ಚುನಾವಣೆಯಲ್ಲಿ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ವೈಎಸ್ಆರ್ಸಿಪಿ ಪಕ್ಷವು 175 ರಲ್ಲಿ 151 ಸ್ಥಾನಗಳನ್ನು ಗೆಲ್ಲುವ ಮೂಲಕ ಅದ್ಭುತ ಜಯ ಸಾಧಿಸಿತ್ತು. ಟಿಡಿಪಿ ಕೇವಲ 23 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು.
2019 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು (ಎನ್ಡಿಎ) ತೊರೆದು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಜೊತೆ ಹೊಂದಾಣಿಕೆ ಮಾಡಿಕೊಂಡ ಚಂದ್ರಬಾಬು ನಾಯ್ಡು ಅವರ ನಿರ್ಧಾರವು ಪಕ್ಷಕ್ಕೆ ದುಬಾರಿಯಾಗಿ ಪರಿಣಮಿಸಿತ್ತು. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಟಿಡಿಪಿ ಸೋಲನುಭವಿಸಿತು, ಇದರ ಪರಿಣಾಮವಾಗಿ ನಾಯ್ಡು ಅವರನ್ನು ರಾಜಕೀಯವಾಗಿ ಬದಿಗೊತ್ತಲಾಯಿತು.
2024ರಲ್ಲಿ ಅವರು ಪುನಃ ಬಿಜೆಪಿ ನೇತೃತ್ವದ ಎನ್ಡಿ ಮೈತ್ರಿಕೂಟಕ್ಕೆ ಮರಳಿದರು. ಮತ್ತು ಅವರ ಪಕ್ಷವು ಆಂದ್ರದಲ್ಲಿ ಭರ್ಜರಿ ಪುನರಾಗಮನ ಮಾಡಿತು. ಎನ್ಡಿ ಮೈತ್ರಿಕೂಟ ಅಧಿಕಾರಕ್ಕೆ ಬಂತು. ಚಂದ್ರಬಾಬು ನಾಯ್ಡು ಸ್ವತಃ ಮುಖ್ಯಮಂತ್ರಿ ಹುದ್ದೆಯನ್ನು ಮರಳಿ ಪಡೆದರು ಮತ್ತು ಕೇಂದ್ರದಲ್ಲಿ ದಾಖಲೆಯ ಮೂರನೇ ಅವಧಿಯನ್ನು ಗೆದ್ದ ಎನ್ಡಿಎ (NDA) ಮೈತ್ರಿಕೂಟದಲ್ಲಿ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದರು.