ಬೆಳಗಾವಿ: ಪೋಕ್ಸೊ ಪ್ರಕರಣಗಳಿಗೆ ಸಂಬಂಧಿಸಿ ಇಡೀ ರಾಜ್ಯದ ಗಮನ ಸೆಳೆದಿರುವ ಬೆಳಗಾವಿಯ ಪೋಕ್ಸೊ ನ್ಯಾಯಾಲಯ ಸೋಮವಾರ ಮತ್ತೊಂದು ಮಹತ್ವದ ತೀರ್ಪು ಪ್ರಕಟಿಸಿದ್ದು, ಆರೋಪಿ ಮಾಡಿರುವ ಶಿಕ್ಷೆಗೆ ಕಠಿಣ ಶಿಕ್ಷೆ ಜಾರಿಯಾಗಿದೆ.
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಐದು ವರ್ಷಗಳ ಕಠಿಣ ಶಿಕ್ಷೆ ಹಾಗೂ ರೂ.5,000 ದಂಡ ವಿಧಿಸಿ ಇಲ್ಲಿಯ ಪೋಕ್ಸೊ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.
ರಾಯಬಾಗ ತಾಲೂಕು ಜಲಾಲಪುರ ಗ್ರಾಮದ ಅನಿಲ ಸುಭಾಷ ಕಾಂಬಳೆ(26) ಶಿಕ್ಷೆಗೊಳಗಾದ ಆರೋಪಿ.
ಬಾಲಕಿ ಇನ್ನೂ ಅಪ್ರಾಪ್ತೆ ಎಂದು ಗೊತ್ತಿದ್ದರೂ 2023 ರ ನವೆಂಬರ್ 23ರಂದು ಅಕೆ ಕಾಲೇಜಿನಿಂದ ನಡೆದುಕೊಂಡು ಬರುವಾಗ ಕಣ್ಣು ಮತ್ತು ಕೈ ಸನ್ನೆ ಮಾಡಿ ಕರೆದು ತನ್ನ ಮರ್ಮಾಂಗ ತೆಗೆದು ತೋರಿಸಿದ್ದಲ್ಲದೆ ಆಕೆಯ ಬೆನ್ನು ಬಿದ್ದು ಲೈಂಗಿಕ ಕಿರುಕುಳ ನೀಡಿದ್ದ. ಅದೇ ವರ್ಷದ ನವೆಂಬರ್ 26 ರಂದು ಸಂಜೆ 7:25 ಗಂಟೆ ಸುಮಾರಿಗೆ ಹಾಲು ತೆಗೆದುಕೊಂಡು ಗ್ರಾಮದಲ್ಲಿರುವ ಒಬ್ಬರ ಮನೆಗೆ ಜಮೀನಿನಲ್ಲಿ ನಡೆದುಕೊಂಡು ಹೊರಟಾಗ ಬಾಲಕಿಗೆ ಲೈಂಗಿಕ ಹಲ್ಲೆ ಮಾಡುವ ಉದ್ದೇಶದಿಂದ ಅಡ್ಡಗಟ್ಟಿ ಕೈ ಹಿಡಿದು ಎಳೆದು ನನ್ನ ಜೊತೆ ಬಾ ಎಂದು ಆರೋಪಿ ಕೈಹಿಡಿದು ಎಳೆದಾಡಿ ಲೈಂಗಿಕ ಹಿಂಸೆ ನೀಡಿದ್ದ.
ನಿಮ್ಮ ಮನ್ಯಾಗ ಹೇಳಿದಿನಿ ಅಂದರ ನಿನಗೆ ಬಿಡುವುದಿಲ್ಲ ಅಂತ ಬಾಲಕಿಯ ಗೌರವಕ್ಕೆ ಧಕ್ಕೆ ಮಾಡಿರುವ ಅಪರಾಧಕ್ಕಾಗಿ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖಾ ಸಹಾಯಕರಾಗಿ ಕೆಲಸ ಕರ್ತವ್ಯ ಮಾಡಿದ ಓ.ಎಸ್. ಒಡೆಯರ್ ಮತ್ತು ದಾಖಲಾಧಿಕಾರಿ ಹಾಗೂ ತನಿಖಾಧಿಕಾರಿ ಐಶ್ವರ್ಯಾ ನಾಗರಾಳ ಅವರು, ಈ ಬಗ್ಗೆ ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯ-1 ಇಲ್ಲಿಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಿ ಒಟ್ಟು ಆರು ಸಾಕ್ಷಿಗಳ ವಿಚಾರಣೆ ಮತ್ತು 30 ದಾಖಲೆಗಳ ಆಧಾರದ ಮೇಲೆ ಆರೋಪಿಯ ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು ತೀರ್ಪು ನೀಡಿ ಆತನಿಗೆ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, ರೂ. 5,000 ದಂಡ, ಈ ಮೊತ್ತ ತುಂಬಲು ತಪ್ಪಿದಲ್ಲಿ ಆರು ತಿಂಗಳ ಶಿಕ್ಷೆ ವಿಧಿಸಿ ಪ್ರಕರಣದ ತೀರ್ಪು ನೀಡಿದ್ದಾರೆ.
ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಒಂದು ಲಕ್ಷ ರೂ. ಪರಿಹಾರ ಧನ ಪಡೆಯಲು ಆದೇಶಿಸಿದೆ. ಹಣವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಐದು ವರ್ಷಗಳವರೆಗೆ ಮುದ್ದತ್ ಠೇವಣಿಯಾಗಿ ಇಡಲು ನ್ಯಾಯಾಲಯ ಆದೇಶಿಸಿದೆ.
ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಎಲ್. ವಿ. ಪಾಟೀಲ ಪ್ರಕರಣ ನಡೆಸಿ ವಾದ ಮಂಡಿಸಿದ್ದರು.


