ಇಸ್ಲಾಮಾಬಾದ್:
ಭಾರತಕ್ಕೆ ತಾಲಿಬಾನ್ ವಿದೇಶಾಂಗ ಸಚಿವ ಅಮಿರ್ ಖಾನ್ ಮುಟ್ಟಾಖಿ ಭೇಟಿ ನೀಡಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಕಾಬೂಲ್ನಲ್ಲಿ ಭಾರತೀಯ ರಾಯಭಾರ ಕಚೇರಿ ಮರುಸ್ಥಾಪನೆ, ವ್ಯಾಪಾರ ವಹಿವಾಟು ಒಪ್ಪಂದ ಸೇರಿದಂತೆ ಹಲವು ಮಾತುಕತೆಗಳು ನಡೆದಿದೆ.
ಇತ್ತ ಈ ಮಹತ್ವದ ನಡೆ ಪಾಕಿಸ್ತಾನವನ್ನು ಕೆರಳಿಸಿದೆ. ಇಷ್ಟೇ ಅಲ್ಲ ಆತಂಕವನ್ನೂ ಹೆಚ್ಚಿಸಿದೆ. ಇದರ ಬೆನ್ನಲ್ಲೇ ಆಫ್ಘಾನಿಸ್ತಾನ ನಂ.1 ಶತ್ರು ರಾಷ್ಟ್ರ ಎಂದು ಪಾಕಿಸ್ತಾನ ಘೋಷಿಸಿದೆ.
ಮಾಧ್ಯಮದ ಜೊತೆ ಮಾತನಾಡಿದ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸೀಫ್, ನೆರೆ ರಾಷ್ಟ್ರ ಆಫ್ಘಾನಿಸ್ತಾನ ಈ ಹಿಂದೆ, ಈಗ ಹಾಗೂ ಇನ್ನು ಮುಂದೆಯೂ ಭಾರತದ ಜೊತೆಗೆ ಕೈಜೋಡಿಸುತ್ತದೆ. ಇದರಲ್ಲಿ ಅನುಮಾನವಿಲ್ಲ. ಆಫ್ಘಾನಿಸ್ತಾನ ಪಕ್ಕದಲ್ಲಿದ್ದುಕೊಂಡು ಬೆನ್ನಿಗೆ ಚೂರಿ ಹಾಕುವ ದೇಶ. ಇನ್ನು ಮುಂದೆ ಆಫ್ಘಾನಿಸ್ತಾನ ನಮ್ಮ ಮೊದಲ ಶತ್ರುದೇಶ ಎಂದು ಹೇಳಿದ್ದಾರೆ.
ಆಫ್ಘಾನಿಸ್ತಾನಕ್ಕೆ ಪಾಕಿಸ್ತಾನ ನಿರಂತರ ಸಹಾಯ ಮಾಡಿದೆ. ಆಫ್ಘಾನಿಸ್ತಾನ ನಿರಾಶ್ರಿತರು ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದಾರೆ. ಆಫ್ಘಾನಿಸ್ತಾನಿಯರು ಪಾಕಿಸ್ತಾನದಲ್ಲಿ ಹೆಂಡತಿ ಇಟ್ಟುಕೊಳ್ಳುತ್ತಾರೆ, ವ್ಯಾಪಾರ ವಹಿವಾಟು ಪಾಕಿಸ್ತಾನದಲ್ಲಿ ನಡೆಸುತ್ತಿದ್ದಾರೆ.
ಬಳಿಕ ಪಾಕಿಸ್ತಾನಕ್ಕೆ ಚೂರಿ ಹಾಕುತ್ತಿದ್ದಾರೆ. ಪಾಕಿಸ್ತಾನದಲ್ಲಿ ವ್ಯಾಪಾರ ವಹಿವಾಟು ಮಾಡಿ ಆಫ್ಘಾನಿಸ್ತಾನ ಮುನ್ನಡೆಸುತ್ತಿದ್ದಾರೆ. ಇದರ ಕೃತಜ್ಞತೆ ಅವರಿಗಿಲ್ಲ. ಪಾಕಿಸ್ತಾನದ ಆಶ್ರಯ, ಪಾಕಿಸ್ತಾನ ನೆರವು, ಇಲ್ಲಿನ ಆತಿಥ್ಯ ಎಲ್ಲವನ್ನೂ ಪಡೆದು ಆಫ್ಘಾನಿಸ್ತಾನಿಯರು ಪಾಕಿಸ್ತಾನ ವಿರುದ್ಧವೇ ವರ್ತಿಸುತ್ತಾರೆ ಎಂದು ಖವಾಜಾ ಆಸೀಫ್ ಕಿಡಿಕಾರಿದ್ದಾರೆ.
ಪಾಕಿಸ್ತಾನದಲ್ಲಿ ದುಡಿದು ದುಡ್ಡನ್ನು ತೆನ್ರಿಕ್ ಇ ತಾಲಿಬಾನ್ ಪಾಕಿಸ್ತಾನದಂತೆ ಸಂಘಟನೆಗಳಿಗೆ ನೀಡುತ್ತಿದ್ದಾರೆ. ಪಾಕಿಸ್ತಾನದ ಮೇಲೆಯೇ ದಾಳಿ ಮಾಡಿಸುತ್ತಿದ್ದಾರೆ. ಬಲೂಚಿಸ್ತಾನದಲ್ಲಿ ಇದೇ ಟಿಟಿಪಿ ಸಂಘಟನೆಗಳು ದಾಳಿ ನಡೆಸುತ್ತಿದೆ. ಆಫ್ಘಾನಿಸ್ತಾನಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಆಸಿಫ್ ಖವಾಜಾ ಹೇಳಿದ್ದಾರೆ.