ಬೆಂಗಳೂರು :
ಭಾರತೀಯ ಹವಾಮಾನಇಲಾಖೆಯು ಪ್ರಸಕ್ತ ಸಾಲಿನ ಬಿಸಿಗಾಳಿ ಕುರಿತು ಮುನ್ಸೂಚನೆ ನೀಡಿದ್ದು, ಪ್ರಸ್ತುತಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶಗಳ ಕೆಲವು ಭಾಗಗಳಲ್ಲಿ ಸಾಮಾನ್ಯತಾಪಮಾನಕ್ಕಿಂತ 2-3 ಡಿಗ್ರಿ ಸೆ. ಅಧಿಕ ತಾಪಮಾನ ದಾಖಲಾಗುತ್ತಿದ್ದು, ಇದು ಮನುಷ್ಯ ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು ಬಿಸಿಗಾಳಿಯಿಂದಾಗುವ ಅಪಾಯಗಳನ್ನು ತಡೆಯಲು ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆಯು ಸಲಹೆ – ಸೂಚನೆಗಳನ್ನು ಪಾಲಿಸುವುದು ಅಗತ್ಯವಿದೆ.
ಬಿಸಿಗಾಳಿಯಿಂದ ಉಂಟಾಗುವ ಅನಾರೋಗ್ಯವನ್ನು ತಡೆಗಟ್ಟಲು ಸಾಧ್ಯವಾದಷ್ಟು ಮದ್ಯಾಹ್ನ 12 ರಿಂದ 3 ರ ವರೆಗಿನ ಗರಿಷ್ಠ ತಾಪಮಾನದ ಅವಧಿಯಲ್ಲಿ ಬಿಸಿಲಿನಲ್ಲಿ ಹೋಗುವುದನ್ನು ಕಡಿಮೆ ಮಾಡಬೇಕು. ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ನೀರನ್ನು ಸೇವಿಸಬೇಕು. ಹಗುರವಾದ ತಿಳಿ ಬಣ್ಣದ ಸಡಿಲವಾದ ಮತ್ತು ಹತ್ತಿ ಬಟ್ಟೆಗಳನ್ನು ಧರಿಸಬೇಕು.
ಬಿಸಿಲಿನಲ್ಲಿ ಹೊರಗೆ ಹೋಗುವಾಗ ರಕ್ಷಣೆಗಾಗಿ ಕನ್ನಡಕ, ಛತ್ರಿ/ ಟೊಪಿ, ಬೂಟುಅಥವಾ ಚಪ್ಪಲಿಗಳನ್ನು ಬಳಸಬೇಕು. ಉಷ್ಣತೆಯು ಅಧಿಕವಾಗಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ಮಾಡಬಾರದು. ಪ್ರಯಾಣ ಮಾಡುವಾಗ ನೀರನ್ನು ಜೊತೆಯಲ್ಲಿತೆಗೆದುಕೊಂಡು ಹೋಗಬೇಕು. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೋನೇಟೆಡ್ ತಂಪು ಪಾನೀಯಗಳನ್ನು ಸೇವಿಸಬಾರದು.
ಈ ಸಂದರ್ಭದಲ್ಲಿ ಬಿಸಿ ಆಹಾರವನ್ನು ಸೇವಿಸಬಾರದು. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಹಾಗೂ ಸಾಕು ಪ್ರಾಣಿಗಳನ್ನು ಬಿಡಬಾರದು. ಮೂರ್ಛೆ ಅಥವಾ ಅನಾರೋಗ್ಯ ಅನಿಸಿದ್ದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.ನಿಂಬೆ ನೀರು, ಮಜ್ಜಿಗೆ ಮುಂತಾದ ಮನೆಯಲ್ಲಿ ತಯಾರಿಸಿದ ಪಾನೀಯ ಮತ್ತು ಓ.ಆರ್.ಎಸ್ಅನ್ನು ಬಳಸಬೇಕು. ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ, ಅವುಗಳಿಗೆ ಕುಡಿಯಲು ಸಾಕಷ್ಟು ನೀರು ಒದಗಿಸಬೇಕು.
ಮನೆಯನ್ನು ತಂಪಾಗಿರಿಸಲು ಪರದೆ, ಶಟರ್ ಅಥವಾ ಸನ್ಶೆಡ್ಗಳನ್ನು ಬಳಸಬೇಕು. ಹೊರಗೆ ಹೋಗುವಾಗ ನೀರಿನ ಬಾಟಲಿ, ಛತ್ರಿ/ ಟೋಪಿ ಅಥವಾ ಕ್ಯಾಪ್/ ಹೆಡ್ಕವರ್, ಹ್ಯಾಂಡ್ಟವೆಲ್, ಹ್ಯಾಂಡ್ ಫ್ಯಾನ್, ಎಲೆಕ್ಟೊಲೈಟ್, ಗ್ಲೂಕೋಸ್, ಮೌಖಿಕ ರೀಹೈಡ್ರೇಶನ್ ಪೌಡರ್ ಒಳಗೊಂಡಿರುವ ಬಿಸಿಗಾಳಿ ತಡೆಗಟ್ಟುವ ಕಿಟ್ ತೆಗೆದುಕೊಂಡು ಹೋಗಲು ನಾಗರಿಕರನ್ನು ಪ್ರೋತ್ಸಾಹಿಸಬೇಕು.
ಬಿಸಿಗಾಳಿಯಿಂದ ಸಾಮಾನ್ಯವಾಗಿ ನಿರ್ಜಲೀಕರಣ, ಶಾಖ ಸೆಳೆತ, ಶಾಖದ, ಬಳಲಿಕೆ ಮತ್ತು ಸನ್ ಸ್ಟ್ರೋಕ್ ನಂತಹ ಆರೋಗ್ಯ ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆ ಇದ್ದು, ಬಿಸಿಗಾಳಿಗೆ ತುತ್ತಾದ ವ್ಯಕ್ತಿಯನ್ನು ನೆರಳಿನ ಅಡಿಯತಂಪಾದ ಸ್ಥಳಕ್ಕೆ ಸ್ಥಳಾಂತರಿಸಬೇಕು. ವ್ಯಕ್ತಿಯು ಪ್ರಜ್ಞೆ ಹೊಂದಿದ್ದರೆ, ನೀರು ಅಥವಾ ಪುನರ್ಜಲೀಕರಣ ಪಾನೀಯ ನೀಡಿ, ತಂಪಾದ ಗಾಳಿಯ ವ್ಯವಸ್ಥೆ ಮಾಡಬೇಕು. ರೋಗ ಲಕ್ಷಣಗಳು ಉಲ್ಬಣಗೊಂಡರೆ, ದೀರ್ಘಕಾಲದವರೆಗೆ ಇದ್ದರೆ ಅಥವಾ ವ್ಯಕ್ತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ನೀಡಬೇಕು. ಮದ್ಯಪಾನ, ಕಾಫಿ ಹಾಗೂ ಶೇಖರಿಸಿದ ಪಾನೀಯಗಳನ್ನು ನೀಡಬಾರದು. ಬಿಸಿಗಾಳಿಗೆ ತುತ್ತಾದವರ ಮೇಲೆ ತಂಪಾದ ಒದ್ದೆ ಬಟ್ಟೆಯನ್ನು ಹಾಕುವ ಮೂಲಕ ವ್ಯಕ್ತಿಯನ್ನು ತಂಪಾಗಿರಿಸಬೇಕು. ಉತ್ತಮ ಗಾಳಿಗಾಗಿ ಬಟ್ಟೆಗಳನ್ನು ಸಡಿಲಗೊಳಿಸಬೇಕು.