ಚೆನ್ನೈ: 2,500 ವರ್ಷ ಇತಿಹಾಸ ಹೊಂದಿರುವ ಕಾಂಚಿಪುರಂನ ಕಂಚಿ ಕಾಮಕೋಟಿ ಪೀಠದ 71ನೇ ಪೀಠಾಧಿಪತಿಯಾಗಿ ‘ಸತ್ಯ ಚಂದ್ರಶೇಖರೇಂದ್ರ ಸರಸ್ವತಿ’ ಅವರನ್ನು ನೇಮಿಸಲಾಗಿದೆ.
ಅಕ್ಷಯ ತೃತೀಯಾ ದಿನದಂದು ಇಲ್ಲಿ ನಡೆದ ಅದ್ಧೂರಿ ಧಾರ್ಮಿಕ ಸಮಾರಂಭದಲ್ಲಿ ಹೊಸ ಪೀಠಾಧಿಪತಿ ನೇಮಿಸುವ ಪ್ರಕ್ರಿಯೆ ನೆರವೇರಿತು.
ಕಾಂಚಿ ಕಾಮಾಕ್ಷಿ ಅಂಬಾಳ್ ದೇವಸ್ಥಾನದಲ್ಲಿ ಬೆಳಿಗ್ಗೆ 5.30ರಿಂದಲೇ ಸನ್ಯಾಸ ದೀಕ್ಷೆಯ ಧಾರ್ಮಿಕ ಸಮಾರಂಭ ಆರಂಭಗೊಂಡಿತು. ಸನ್ಯಾಸ ಸ್ವೀಕಾರಕ್ಕೂ ಮುನ್ನ ಸತ್ಯ ವೆಂಕಟಸೂರ್ಯ ಸುಬ್ರಹ್ಮಣ್ಯ ಗಣೇಶ ಶರ್ಮಾ ದ್ರಾವಿಡ್ (ಪೂರ್ವಾಶ್ರಮದ ಹೆಸರು) ಅವರು ಪಂಚ ಗಂಗಾ ತೀರ್ಥದಲ್ಲಿ ಮುಳುಗಿ, ನಂತರ ತಮ್ಮ ಗುರುಗಳಾದ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿ ನೀಡಿದ ಕೇಸರಿ ವಸ್ತ್ರವನ್ನು ಧರಿಸಿದರು. ನಂತರ ಪಂಡಿತರು ಅವರನ್ನು ವೇದಿಕೆಗೆ ಕರೆತಂದು, ‘ದಂಡ’ ನೀಡಿ, ಶಂಖದ ಮೂಲಕ ಅಭಿಷೇಕ ನೆರವೇರಿಸಿದರು.
ಐದು ಭಾಷೆಗಳಲ್ಲಿ ಧಾರ್ಮಿಕ ಸಂದೇಶ ನೀಡಿದ ಬಳಿಕ ಅವರಿಗೆ ‘ಸತ್ಯ ಚಂದ್ರಶೇಖರೇಂದ್ರ ಸರಸ್ವತಿ’ ಎಂದು ನಾಮಕರಣ ಮಾಡಲಾಯಿತು. ನಂತರ ಅವರು, ಗುರುವಿನ ಜೊತೆಗೆ ದೇವಸ್ಥಾನದಿಂದ ಮಠದವರೆಗೂ ಮೆರವಣಿಗೆಯಲ್ಲಿ ತೆರಳಿದರು. ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ ಹಾಗೂ ಸ್ವಾಮೀಜಿಯ ಪೂರ್ವಾಶ್ರಮದ ತಂದೆ–ತಾಯಿ, ಕಿರಿಯ ಸಹೋದರಿ ಕೂಡ ಭಾಗಿಯಾಗಿದ್ದರು.
ಆಂಧ್ರಪ್ರದೇಶ ಅನ್ನಾವರಂ ಮೂಲದ ಗಣೇಶ ಪ್ರಸಾದ ಅವರು ತಮ್ಮ ಐದನೇ ವಯಸ್ಸಿನಲ್ಲಿ ಋಗ್ವೇದ ಕಲಿಕೆಯನ್ನು ಆರಂಭಿಸಿದರು. ಆದಾದ ಬಳಿಕ ಯಜುರ್ವೇದ, ಸಾಮವೇದ, ಷಡಾಂಗ ಹಾಗೂ ದಶೋಪನಿಷತ್ಗಳನ್ನು ಕಲಿತರು. ಇವರ ತಂದೆ ಶ್ರೀನಿವಾಸ ಸೂರ್ಯ ಸುಬ್ರಹ್ಮಣ್ಯ ಧನ್ವಂತರಿ ಅವರು ಅನ್ನಾವರಂನ ಶ್ರೀ ವೀರ ವೆಂಕಟ ಸತ್ಯನಾರಾಯಣ ಸ್ವಾಮಿ ದೇವಾಲಯದ ಅರ್ಚಕರಾಗಿದ್ದಾರೆ.
ವೇದ ಶಿಕ್ಷಣವನ್ನು ಕರ್ನಾಟಕದ ಹೊಸಮನೆ ರತ್ನಾಕರ ಭಟ್ ಶರ್ಮಾ ಅವರಿಂದ ಪಡೆದಿದ್ದರು.