ಅಥಣಿ :
ದಾಸ ಶ್ರೇಷ್ಠ ಕನಕದಾಸರು ವಿಶ್ವದ ಶ್ರೇಷ್ಠ ಸಂತರು. ಜೀವನದಲ್ಲಿ ಅವರ ತತ್ವ ಸಂದೇಶ ಅಳವಡಿಸಿಕೊಂಡರೆ ನೆಮ್ಮದಿಯುತ, ಸಾರ್ಥಕ ಬದುಕು ನಮ್ಮದಾಗಲು ಸಾಧ್ಯ ಎಂದು ಮಾಜಿ ಉಪಮುಖ್ಯಮಂತ್ರಿ, ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದ ಶ್ರೀ ದಡ್ಡಿ ಮುತ್ಯಾ ದೇವಸ್ಥಾನದ ಮುಂಭಾಗದಲ್ಲಿ ತಾಲೂಕು ಹಾಲುಮತ ಕುರುಬರ ಸಂಘ ಇವರ ಆಶ್ರಯದಲ್ಲಿ ಗುರುವಾರ ನಡೆದ ದಾಸ ಶ್ರೇಷ್ಠ ಭಕ್ತ ಕನಕದಾಸರ 536ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ದಾಸ ಶ್ರೇಷ್ಠ ಕನಕದಾಸರ ತತ್ವ, ಸಂದೇಶಗಳು, ಅವರ ವಿಚಾರಧಾರೆಗಳು ಉತ್ತಮ ಹಾಗೂ ಮೌಲ್ಯಯುತವಾಗಿವೆ. ಇವುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಾಗಬೇಕು. ಇದರಿಂದ ನಮ್ಮ ಜೀವನ ಆದರ್ಶಮಯವಾಗಬಲ್ಲದು. ಇಂತಹ ಮಹಾನ್ ಸಂತರು, ಶರಣರು, ಮಹಾತ್ಮರು ಯಾವುದೇ ಒಂದೇ ಜಾತಿಗೆ ಸೀಮಿತರಾದ ವ್ಯಕ್ತಿಗಳಲ್ಲ. ಎಲ್ಲ ಸಮಾಜದವರು ಇಂತವರ ಸ್ಮರಣೆ, ಜಯಂತಿ ಆಚರಣೆ, ಉತ್ಸವಗಳನ್ನು ಒಟ್ಟಾಗಿ ಆಚರಿಸಬೇಕು. ಇದರಿಂದ ಸಮಾಜದಲ್ಲಿ ಒಗ್ಗಟ್ಟಿನ ಸಂದೇಶ ಮೂಡುತ್ತದೆ ಎಂದು ಹೇಳಿದರು.
ಹಾಲುಮತ ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಶಿಕ್ಷಣ ಎನ್ನುವುದು ಕೇವಲ ನೌಕರಿಗಾಗಿ ಮಾತ್ರವಲ್ಲ, ಮನುಷ್ಯನ ಜ್ಞಾನಾರ್ಜನೆಗೆ, ಉತ್ತಮ, ಸಂಸ್ಕಾರಯುತ ಬದುಕು ಸಾಗಿಸಲು ಪ್ರತಿಯೊಬ್ಬರಿಗೂ ಶಿಕ್ಷಣದ ಅಗತ್ಯವಿದೆ. ಆದ್ದರಿಂದ ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಎಂದು ಹೇಳಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಾಲುಮತ ಸಮಾಜ ಬಾಂಧವರು ಸಂಪೂರ್ಣವಾಗಿ ನನ್ನನ್ನು ಬೆಂಬಲಿಸಿದ್ದರಿಂದ ಅತ್ಯಧಿಕ ಮತಗಳ ಅಂತರದ ಗೆಲವು ಪಡೆಯಲು ಸಾಧ್ಯವಾಗಿದೆ. ನಿಮ್ಮೆಲ್ಲರ ಋಣ ನನ್ನ ಮೇಲೆ ಬಹಳಷ್ಟಿದೆ. ಹಾಲುಮತ ಸಮಾಜದವರ ಪ್ರೀತಿ ಅಭಿಮಾನಕ್ಕೆ ನಾನು ಋಣಿಯಾಗಿದ್ದೇನೆ ಎಂದು ತಿಳಿಸಿದರು.
ಅಥಣಿ ತಾಲೂಕಿನ ಹಾಲುಮತ ಸಮಾಜ ಬಾಂಧವರ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಕಾಗವಾಡ ಶಾಸಕ ರಾಜು (ಭರಮಗೌಡ) ಕಾಗೆ, ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ ಮಾತನಾಡಿದರು. ಸುರೇಶ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ರಾವಸಾಬ ಬೆವನೂರ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡರಾದ ಸದಾಶಿವ ಬುಟಾಳಿ, ಗಜಾನನ ಮಂಗಸೂಳಿ, ರಾವಸಾಬ ಐಹೊಳೆ, ಸುರೇಶ ಮಾಯಣ್ಣವರ, ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ತಾ.ಪಂ. ಇ.ಒ. ಶಿವಾನಂದ ಕಲ್ಲಾಪುರ, ಪಿಡಬ್ಲುಡಿ ಎ.ಇ.ಇ. ವೀರಣ್ಣ ವಾಲಿ, ಅಬಕಾರಿ ಸಿ.ಪಿ.ಐ. ಮಹಾಂತೇಶ ಬಂಡಗರ ಸೇರಿದಂತೆ ಮತ್ತಿತರ ಉಪಸ್ಥಿತರಿದ್ದರು. ವಿವಿಧ ಮುಖಂಡರು, ಅಧಿಕಾರಿಗಳು, ಸಾರ್ವಜನಿಕರು, ಹಾಲುಮತ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ಸಾರಿಗೆ ಸಂಸ್ಥೆ :
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಥಣಿ ಘಟಕದಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತಿಯಲ್ಲಿ ಶಾಸಕ ಲಕ್ಷ್ಮಣ ಸವದಿ ಪಾಲ್ಗೊಂಡು ಕನದಾಸರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ನಮನ ಸಲ್ಲಿಸಿದರು. ಕನಕದಾಸರ ಜಯಂತಿ ನಿಮಿತ್ತ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಲಕ್ಷ್ಮಣ ಸವದಿ ಮಾಲಾರ್ಪಣೆ ಮಾಡಿದರು.