ಜನ ಜೀವಾಳ ಜಾಲ: ಬೆಳಗಾವಿ:ಆಡಳಿತ ಒಂದು ಕಲೆ, ಜನರ ಮೇಲೆ ಆಡಳಿತ ನಡೆಸುವುದು ಸ್ವಸ್ಥ ಸಮಾಜ ಮುನ್ನಡೆಸಲು ಎನ್ನುವುದು ದಿಟ. ದಕ್ಷ ಹಾಗೂ ಜನಾನುರಾಗಿ ಆಡಳಿತ ನಡೆಸಿದ ಕಾರಣಕ್ಕೆ ಒಬ್ಬ ಐಎಎಸ್ ಅಧಿಕಾರಿಗೆ ನಾಲ್ಕು ಹೊಸ ಹುದ್ದೆ ಒಲಿದು ಬಂದಿದೆ.
ಹಿರಿಯ ಐಎಎಸ್ ಅಧಿಕಾರಿ ಕಾರ್ಯದರ್ಶಿ ಶ್ರೇಣಿಯಲ್ಲಿರುವ ಎನ್. ಜಯರಾಮ ಅವರಿಗೆ ಮುಖ್ಯಮಂತ್ರಿ ಕಾರ್ಯದರ್ಶಿ, ಕಂದಾಯ ಕಾರ್ಯದರ್ಶಿ, ವಾರ್ತಾ ಮತ್ತು ಪ್ರಚಾರ ಇಲಾಖೆಯ ಕಾರ್ಯದರ್ಶಿ ಹಾಗೂ ಬೆಂಗಳೂರು ಜಲಮಂಡಳಿ ಚೇರಮನ್ ಹುದ್ದೆ ನಿಭಾಯಿಸುವ ಮಹತ್ತರ ಜವಾಬ್ದಾರಿಯನ್ನು ಸಿದ್ದರಾಮಯ್ಯ ಅವರ ಸರಕಾರ ನೀಡಿ ಗಮನ ಸೆಳೆದಿದೆ.
ಹಿಂದಿನ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ರಾಜ್ಯದ ಅತಿದೊಡ್ಡ ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿ ಆಗಿ ನಾಲ್ಕೂವರೆ ವರ್ಷ ಸೇವೆ ಸಲ್ಲಿಸಿದ್ದರು ಎನ್. ಜಯರಾಮ.
ಬೆಳಗಾವಿ ಪ್ರಾದೇಶಿಕ ಆಯುಕ್ತರಾಗಿ, ಜಿಲ್ಲಾಧಿಕಾರಿ ಆಗಿ ಜನಾನುರಾಗಿ ಹಾಗೂ ದಕ್ಷ ಆಡಳಿತಗಾರನಾಗಿ ಜಯರಾಮ ಹೆಸರು ಗಳಿಸಿದ್ದರು. ಇಲ್ಲಿಂದ ವರ್ಗವಾಗಿ ಬೆಂಗಳೂರಿಗೆ ಹೋದಾಗಲು ಉತ್ತಮವಾದ ಹುದ್ದೆಗಳನ್ನೇ ಸರಕಾರ ಅವರಿಗೆ ನೀಡಿತ್ತು. ಪ್ರಸ್ತುತ ಸರಕಾರ ಅವರಿಗೆ ಮಹತ್ತರ ಹುದ್ದೆಗಳಲ್ಲಿ ಪೂರ್ಣ ಮತ್ತು ಹೆಚ್ಚುವರಿ ಜವಾಬ್ದಾರಿಯಲ್ಲಿ ನಾಲ್ಕು ಹುದ್ದೆಗಳನ್ನು ನೀಡಿದೆ. ಮುಖ್ಯಮಂತ್ರಿ ಕಾರ್ಯದರ್ಶಿಗೆ ಜಯರಾಮ ನೇಮಕವಾಗುತ್ತಿದ್ದಂತೆ ಬೆಳಗಾವಿ ವಿಭಾಗದ ಜಿಲ್ಲೆಗಳಲ್ಲಿ ಹರ್ಷೋದ್ಘಾರ ಉಂಟಾಗಿದೆ.
ಸಮಸ್ತ ಬೆಳಗಾವಿ ಪತ್ರಕರ್ತರು ಹಾಗೂ ಬೆಳಗಾವಿ ವಾರ್ತಾ ಇಲಾಖೆಯ ಪರವಾಗಿ ‘ಜನಜೀವಾಳ‘ ಅವರಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸಿದೆ.