ಬೆಂಗಳೂರು :
ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆಸಲು ಉದ್ದೇಶಿಸಿದ್ದ ’87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳವನ್ನು ಬರಗಾಲ ಹಿನ್ನೆಲೆ ಮುಂದಕ್ಕೆ ಹಾಕಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಬರಗಾಲ ಛಾಯೆ ಆವರಿಸಿದೆ. ರೈತ ಸಂಕಟದಲ್ಲಿರುವಾಗ ಸಂತಸ ಆಚರಿಸುವ ಸಮ್ಮೇಳನಕ್ಕೆ ಅರ್ಥವೇ ಇಲ್ಲ. ʻಅನ್ನ ಇದ್ದಾಗ ಸಂತಸ, ಸಂತಸ ಇದ್ದಾಗ ಸಂಭ್ರಮ, ಸಂಭ್ರಮ ಇದ್ದಾಗ ಸಾಹಿತ್ಯʼ ಎನ್ನುವುದನ್ನು ನಾವು ಅರಿತುಕೊಂಡು ಈ ಬಾರಿ ಮಂಡ್ಯದಲ್ಲಿ 2024 ಜನವರಿಯಲ್ಲಿ ನಡೆಯಬೇಕಿದ್ದ 87ನೇಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ರಾಜ್ಯದಲ್ಲಿ ಭೂಮಿ ನೀರಿಲ್ಲದೆ ಬಾಯ್ದೆರೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ಕನ್ನಡದ ಅಕ್ಷರ ಜಾತ್ರೆಯನ್ನು ನಡೆಸುವುದು ಸಮರ್ಪಕವಲ್ಲ. ಈ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ನಡೆಸಲು ಉದ್ದೇಶಿಸಿದ್ದ ಅಕ್ಷರ ಜಾತ್ರೆಯನ್ನು ಮುಂದೂಡಲಾಗಿದೆ ಎಂದು ಅವರು ತಿಳಿಸಿದ್ದಾರೆ.