ಬೆಂಗಳೂರು :
ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ ತಾನು ಪ್ರೀತಿಸಿದ ಯುವಕನ ಜೊತೆಗೆ ಹಸೆಮಣೆ ಏರಲು ಮುಂದಾಗಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನವೆಂಬರ್ 29ರಂದು ಬುಧವಾರ ಸಂಜೆ ತಾನು ಕುವೆಂಪು ಆಶಯದಂತೆ ಮಂತ್ರ ಮಾಂಗಲ್ಯದ ಮೂಲಕ ವಿಜಯ ಘೋರ್ಪಡೆ ಅವರ ಜೊತೆ ಮದುವೆಯಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ನನ್ನ ಮದುವೆಗೆ ಕುಟುಂಬ ಸಮೇತರಾಗಿ ನೀವು ಬಂದು ಹರಸಿ, ಆಶೀರ್ವದಿಸಿ. ಮದುವೆ ಸಮಯದಲ್ಲಿ ಯಾವುದೇ ಕ್ಯಾಮೆರಾಗಳಿಗೆ ಅವಕಾಶವಿಲ್ಲ. ಅನ್ಯಥಾ ಭಾವಿಸಬೇಡಿ. ನಾವೇ ನಿಮಗೆ ಸಾಧ್ಯವಾದಷ್ಟು ಪೋಟೋಗಳನ್ನು ಮತ್ತು ದೃಶ್ಯಗಳನ್ನು ತಲುಪಿಸುತ್ತೇವೆ. ನನ್ನ ಚಿತ್ರ ಜೀವನದ ಎಲ್ಲ ಬೆಳವಣಿಗೆಯಲ್ಲಿ ನೀವು ನನ್ನ ಜೊತೆಯಾಗಿದ್ದೀರಿ. ನನ್ನ ಮದುವೆಗೆ ಬಂದು ಹರಸಿ, ಹಾರೈಸಿ ಎಂದು ಅವರು ಕೋರಿದ್ದಾರೆ.
ವಿಜಯ ಅವರೇ ಪೂಜಾ ಗಾಂಧಿಯವರಿಗೆ ಕನ್ನಡ ಕಲಿಸಿದ್ದು ಎಂಬ ಮಾಹಿತಿಯೂ ಲಭ್ಯವಾಗಿದೆ. ಬೆಂಗಳೂರಿನ ಯಲಹಂಕದಲ್ಲಿ ಈ ಮದುವೆ ನಡೆಯುತ್ತಿದ್ದು, ಈಗಾಗಲೇ ಪೂಜಾ ತಮ್ಮ ಆಪ್ತರಿಗೆ ಕರೆ ಮಾಡಿ, ಮದುವೆ ಆಹ್ವಾನ ನೀಡಿದ್ದಾರೆ. ಮದುವೆ ಅತ್ಯಂತ ಸರಳವಾಗಿ ನಡೆಯುವುದರಿಂದ ಕೇವಲ ಹಸ್ತಾಕ್ಷರದಲ್ಲಿ ಆಮಂತ್ರಣ ಪತ್ರಿಕೆಯನ್ನು ರೆಡಿ ಮಾಡಿ, ಆಪ್ತರಿಗೆ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವಿಜಯ ಅವರು ಬೆಂಗಳೂರಿನ ಲಾಜೆಸ್ಟಿಕ್ ಕಂಪನಿಯ ಮಾಲೀಕರು.
ಬಾಲಿವುಡ್, ಕಾಲಿವುಡ್ನಲ್ಲಿ ನಟಿಸಿದ್ದ ಪೂಜಾ ಅವರ ಸಿನಿ ಬದುಕಿಗೆ ತಿರುವು ನೀಡಿದ್ದ ಸಿನಿಮಾ, ಯೋಗರಾಜ್ ಭಟ್ ನಿರ್ದೇಶನದ ‘ಮುಂಗಾರು ಮಳೆ’. ಈ ಸಿನಿಮಾ ಬಳಿಕ ‘ಮಿಲನ’, ‘ಕೃಷ್ಣ’ ಹೀಗೆ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಪೂಜಾ ನಟಿಸಿದರು. ಜೊತೆಗೆ ತಮಿಳು ಸಿನಿಮಾಗಳಲ್ಲೂ ಕಾಣಿಸಿಕೊಂಡರು. ‘ದಂಡುಪಾಳ್ಯ’, ‘ಅಭಿನೇತ್ರಿ’ ಸಿನಿಮಾಗಳ ಬಳಿಕ ಸಣ್ಣ ಬ್ರೇಕ್ ತೆಗೆದುಕೊಂಡಿದ್ದರು. 2020ರ ಆರಂಭದಲ್ಲಿ ಪಿತ್ತಕೋಶದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಈ ಅವಧಿಯಲ್ಲಿ ನಟನೆಯಿಂದ ದೂರವೇ ಉಳಿದಿದ್ದರು. ಇತ್ತೀಚೆಗೆ ‘ಸಂಹಾರಿಣಿ’ ಎಂಬ ಚಿತ್ರದಲ್ಲಿ ಪೂಜಾ ಕಾಣಿಸಿಕೊಂಡಿದ್ದರು.
ಕನ್ನಡ ಕಲಿಕೆ
ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದ ಪೂಜಾ ಗಾಂಧಿ ಅವರು ಕನ್ನಡ ಕಲಿಕೆಯತ್ತ ಆಸಕ್ತಿ ತೋರಿದ್ದರು. ಕಳೆದ ಎರಡು ವರ್ಷಗಳಿಂದ ಕನ್ನಡದ ಅಕ್ಷರಗಳು, ವರ್ಣಮಾಲೆಯನ್ನು ಮಕ್ಕಳಂತೆ ಅವರು ಅಭ್ಯಾಸ ಮಾಡಿದ್ದಾರೆ. ಹಂತಹಂತವಾಗಿ ವಾಕ್ಯ ರಚನೆಯನ್ನೂ ಅವರು ಕಲಿತಿದ್ದಾರೆ. ಕನ್ನಡದ ಮೇಲಿನ ಅವರ ಪ್ರೀತಿಗೆ ಅವರೇ ಕನ್ನಡದಲ್ಲಿ ಬರೆದ ಮದುವೆ ಆಮಂತ್ರಣವೇ ಸಾಕ್ಷ್ಯವಾಗಿದೆ.