ದೊಡ್ಡಬಳ್ಳಾಪುರ: ಸ್ಯಾಂಡಲ್ವುಡ್ ನಟ, ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಅವರ ಮುಖಕ್ಕೆ ಮುಖಕ್ಕೆ ಮಸಿ ಬಳಿಯಲು ಯತ್ನಿಸಿದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ದೊಡ್ಡಬಳ್ಳಾಪುರ ಎಲ್ಲಮ್ಮ ದೇವಸ್ಥಾನಕ್ಕೆ ಆಗಮಿಸಿದ್ದಾಗ ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ದರ್ಶನ್ ಫ್ಯಾನ್ಸ್ ಎನ್ನಲಾಗಿದ್ದ ಕೆಲವರ ವಿರುದ್ಧ ಪ್ರಥಮ್ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳ ಮಹಜರಿಗೆ ಹೋಗಿ ವಾಪಸ್ ಠಾಣೆಗೆ ಆಗುವಾಗ ಅವರ ಮುಖಕ್ಕೆ ಪೊಲೀಸರ ಸಮ್ಮುಖದಲ್ಲೇ ಮಸಿ ಬಳಿಯಲು ಯತ್ನಿಸಲಾಗಿದೆ.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಸ್ಥಳ ಮಹಜರುಮುಗಿಸಿ ವಾಪಸ್ ಹೋಗುವ ವೇಳೆ ಠಾಣೆಯ ಮುಂದೆ ಜಮಾಯಿಸಿದ ಅಂಬೇಡ್ಕರ ಭೀಮ ಸೇನೆಯ ಕಾರ್ಯಕರ್ತರು ಪ್ರಥಮ್ ಅವರನ್ನು ತರಾಟೆಗೆ ತೆಗೆದುಕೊಂಡರು. ಆಗ ಪ್ರಥಮ್ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಲು ಮುಂದಾದರು. ಅಷ್ಟರಲ್ಲಿ ಅವರ ಮುಖಕ್ಕೆ ಕಾರ್ಯಕರ್ತನೋರ್ವ ಮುಖಕ್ಕೆ ಮಸಿ ಬಳಿಯಲು ಪ್ರಯತ್ನಿಸಿದ್ದು, ಪೊಲೀಸರು ತಕ್ಷಣವೇ ಅವರನ್ನು ಅಲ್ಲಿಂದ ಕರೆದೊಯ್ದರು. ಈ ಘಟನೆಯ ವೀಡಿಯೊ ವೈರಲ್ ಆಗಿದೆ.
ಗುರುವಾರ (ಜುಲೈ 31) ಪ್ರಥಮ್ ಠಾಣೆಗೆ ಹಾಜರಾಗಿದ್ದರು. ವಿಚಾರಣೆ ಸಲುವಾಗಿ ಅವರನ್ನು ಸ್ಥಳ ಮಹಜರಿಗೆ ಅವರನ್ನು ಕರೆದುಕೊಂಡು ಹೋಗಲಾಯಿತು. ಮಹಜರು ಮುಗಿಸಿ ಮತ್ತೆ ಠಾಣೆಗೆ ಬಂದಾಗ ಅವರನ್ನು ದಲಿತ ಸಂಘಟನೆ ಕಾರ್ಯಕರ್ತರು ಪ್ರಶ್ನಿಸಿದರು. ಜುಲೈ 29 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡುವ ಸಮಯದಲ್ಲಿ ಪ್ರಥಮ್ ಡಾ.ಬಿ.ಆರ್. ಅಂಬೇಡ್ಕರ ಮತ್ತು ಸಂವಿಧಾನದ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಭೀಮ ಸೇನೆ ಕಾರ್ಯಕರ್ತರು ಪ್ರಥಮ್ ಅವರಿಗೆ ಕ್ಷಮೆ ಕೇಳುವಂತೆ ಒತ್ತಾಯಿಸಿದರು. ಈ ವೇಳೆ ಕಾರ್ಯಕರ್ರೊಬ್ಬರು ಅವರ ಮುಖಕ್ಕೆ ಮಸಿ ಬಳಿಯಲು ಯತ್ನಿಸಿದರು. ಕೂಡಲೇ ಪ್ರಥಮ್ ಅವರನ್ನು ರಕ್ಷಿಸಿದ ಪೊಲೀಸರು ಠಾಣೆಯೊಳಗೆ ಕರೆದೊಯ್ದರು ಎಂದು ವರದಿಯಾಗಿದೆ.